ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿರುವ ಅನಾಥ ವಾಹನಗಳ ವಿರುದ್ಧ ರಾಜ್ಯ ಸರ್ಕಾರ ಮಹತ್ವದ ಕಾರ್ಯಾಚರಣೆಗೆ ಚಾಲನೆ ನೀಡಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ವತಃ ಅನಾಥ ವಾಹನಕ್ಕೆ ನೋಟಿಸ್ ಅಂಟಿಸಿ, ಚಕ್ರಕ್ಕೆ ಲಾಕ್ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ನಗರದ ಹಲವು ಪ್ರಮುಖ ರಸ್ತೆಗಳಲ್ಲಿ, ವಿಶೇಷವಾಗಿ ಫುಟ್‌ಪಾತ್‌ಗಳ ಮೇಲೆ ತಿಂಗಳುಗಳ ಕಾಲ ನಿಲ್ಲಿಸಲ್ಪಟ್ಟಿರುವ ಕಾರುಗಳು, ಬೈಕ್‌ಗಳು ಹಾಗೂ ಇತರೆ ವಾಹನಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಇಂತಹ ವಾಹನಗಳನ್ನು ತೆರವುಗೊಳಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, “ಸಾರ್ವಜನಿಕ ರಸ್ತೆ ಮತ್ತು ಫುಟ್‌ಪಾತ್‌ಗಳು ಜನರ ಬಳಕೆಗೆ. ಅವುಗಳನ್ನು ವಾಹನ ನಿಲುಗಡೆ ಕೇಂದ್ರಗಳನ್ನಾಗಿ ಬಳಸಲು ಅವಕಾಶ ನೀಡುವುದಿಲ್ಲ. ಮೊದಲಿಗೆ ವಾಹನಗಳಿಗೆ ನೋಟಿಸ್ ಅಂಟಿಸಲಾಗುತ್ತದೆ. ನಿಗದಿತ ಅವಧಿಯೊಳಗೆ ವಾಹನ ತೆರವುಗೊಳಿಸದಿದ್ದರೆ ಟೋಯಿಂಗ್ ಮಾಡಿ ಜಪ್ತಿ ಮಾಡಲಾಗುತ್ತದೆ. ಬಳಿಕ ಕಾನೂನು ಪ್ರಕ್ರಿಯೆಯಂತೆ ಹರಾಜು ಕೂಡ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಕಾರ್ಯಾಚರಣೆ ಕೇವಲ ಕ್ವೀನ್ಸ್ ರಸ್ತೆಗೆ ಸೀಮಿತವಾಗದೆ, ಶಾಂತಿನಗರ ಸೇರಿದಂತೆ ನಗರದ ವಿವಿಧ ವಲಯಗಳಲ್ಲೂ ಮುಂದುವರಿಯಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ಸಂಚಾರ ಪೊಲೀಸರು ಜಂಟಿಯಾಗಿ ಅಭಿಯಾನ ನಡೆಸಲಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಅನಾಥ ವಾಹನಗಳನ್ನು ಗುರುತಿಸಿ ತೆರವುಗೊಳಿಸಲಿದ್ದಾರೆ.
ನಗರದಲ್ಲಿ ಫುಟ್‌ಪಾತ್‌ಗಳನ್ನು ಪಾದಚಾರಿಗಳಿಗೆ ಮುಕ್ತಗೊಳಿಸುವ ಹಾಗೂ ರಸ್ತೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಸರ್ಕಾರ ಈಗಾಗಲೇ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಇದೀಗ ಅನಾಥ ವಾಹನಗಳ ತೆರವು ಅಭಿಯಾನಕ್ಕೂ ವೇಗ ನೀಡಲಾಗಿದೆ.
ಬೆಂಗಳೂರಿನಲ್ಲಿ ಸಾರ್ವಜನಿಕ ರಸ್ತೆಗಳು ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ತಿಂಗಳುಗಳ ಕಾಲ ನಿಂತಿರುವ ಅನಾಥ ವಾಹನಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನಂಜಪ್ಪ ಸರ್ಕಲ್‌ನ ಕ್ವೀನ್ಸ್ ರಸ್ತೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಸ್ವತಃ ವಾಹನಕ್ಕೆ ನೋಟಿಸ್ ಅಂಟಿಸಿ ಚಕ್ರಕ್ಕೆ ಲಾಕ್ ಹಾಕುವ ಮೂಲಕ ವಿಶೇಷ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದು, ಶಾಂತಿನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಈ ಅಭಿಯಾನ ಮುಂದುವರಿಯಲಿದೆ.

