ಅಂಧ ದೈವಜ್ಞಾನಿ ಎಂದು ಪರಿಗಣಿಸಲ್ಪಡುವ ಬಾಬಾ ವಂಗಾ, 2025ರ ಆರ್ಥಿಕ ಪರಿಸ್ಥಿತಿಯ ಬಗ್ಗೆ ನೀಡಿದ್ದ ಭವಿಷ್ಯವು ಈಗ ನಿಜವಾಗುವ ಲಕ್ಷಣಗಳು ಕಾಣಿಸುತ್ತಿವೆ. ಈ ವರ್ಷ ಜಗತ್ತನ್ನು ಆರ್ಥಿಕ ದುರಂತವು ಆವರಿಸಲಿದೆ ಎಂದು ಅವರು ನುಡಿದಿದ್ದರು. ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಗಳು ಮತ್ತು ಇತರ ದೇಶಗಳೊಂದಿಗಿನ ಟಾರಿಫ್ ಯುದ್ಧದ ಹಿನ್ನೆಲೆಯಲ್ಲಿ ಈ ಭವಿಷ್ಯವು ಮಹತ್ವ ಪಡೆದುಕೊಂಡಿದೆ.
ಟ್ರಂಪ್, ವಿವಿಧ ದೇಶಗಳ ಮೇಲೆ ಭಾರಿ ಸುಂಕ ವಿಧಿಸಿದ ಪರಿಣಾಮವಾಗಿ ಜಾಗತಿಕ ಷೇರು ಮಾರುಕಟ್ಟೆಗಳು ಸೋಮವಾರ ತೀವ್ರ ಕುಸಿತ ಕಂಡವು. 1987ರ ನಂತರ ಇದೇ ಮೊದಲ ಬಾರಿಗೆ ಇಂತಹ ಆರ್ಥಿಕ ಹಿಂಜರಿತ ಉಂಟಾಗುವ ಭೀತಿ ಎದುರಾಗಿದೆ.
ಟ್ರಂಪ್ ಅವರು ಏಪ್ರಿಲ್ 5ರಿಂದ ಶೇಕಡಾ 10ರ ಮೂಲ ಸುಂಕವನ್ನು ಜಾರಿಗೆ ತಂದಿದ್ದು, ಅಮೆರಿಕದೊಂದಿಗೆ ಹೆಚ್ಚಿನ ವ್ಯಾಪಾರ ಕೊರತೆ ಹೊಂದಿರುವ ಸುಮಾರು 60 ದೇಶಗಳ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗಿದೆ. ಚೀನಾ ಮೇಲೆ ಶೇಕಡಾ 34 ಮತ್ತು ಯುರೋಪಿಯನ್ ಒಕ್ಕೂಟದ ಮೇಲೆ ಶೇಕಡಾ 20ರಷ್ಟು ಸುಂಕ ವಿಧಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಮತ್ತು ಯುರೋಪಿಯನ್ ಒಕ್ಕೂಟ ಸಹ ಅಮೆರಿಕದ ಸರಕುಗಳ ಮೇಲೆ ಪ್ರತೀಕಾರದ ಸುಂಕ ವಿಧಿಸಿವೆ. ಚೀನಾ ಅಮೆರಿಕದ ಸರಕುಗಳ ಮೇಲೆ ಶೇಕಡಾ 34ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದು, ಟ್ರಂಪ್ ಇದನ್ನು ವಿರೋಧಿಸಿ ಚೀನಾದ ಮೇಲೆ ಮತ್ತಷ್ಟು ಸುಂಕ ವಿಧಿಸಿದ್ದಾರೆ.
ಈ ನಡುವೆ, ಟ್ರಂಪ್, ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ನಡೆಸಲು ಸಿದ್ಧವಿರುವ ಎಲ್ಲಾ ದೇಶಗಳ ಮೇಲಿನ ಪ್ರತೀಕಾರದ ಸುಂಕವನ್ನು 90 ದಿನಗಳವರೆಗೆ ಸ್ಥಗಿತಗೊಳಿಸಿದ್ದಾರೆ. ಆದರೆ ಚೀನಾದ ಮೇಲಿನ ಸುಂಕವನ್ನು ತಕ್ಷಣದಿಂದಲೇ ಶೇಕಡಾ 125ಕ್ಕೆ ಹೆಚ್ಚಿಸಿದ್ದಾರೆ. ಚೀನಾ ಜಾಗತಿಕ ಮಾರುಕಟ್ಟೆಗೆ ಗೌರವ ತೋರಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತಜ್ಞರು ಮಾರುಕಟ್ಟೆಯ ಈ ಏರಿಳಿತಗಳ ಬಗ್ಗೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಸಿಟಿಗ್ರೂಪ್‌ನ ಗ್ಲೋಬಲ್ ವೆಲ್ತ್ ಮುಖ್ಯಸ್ಥ ಆಂಡಿ ಸೀಗ್ ಅವರು ಮಾರುಕಟ್ಟೆಯ ಈ ಪರಿಸ್ಥಿತಿಯನ್ನು ಬೆನ್ನಟ್ಟಬೇಡಿ ಎಂದು ಸಲಹೆ ನೀಡಿದ್ದಾರೆ.
ಇದಲ್ಲದೆ, ಬಾಬಾ ವಂಗಾ ಅವರು ಈ ವರ್ಷ “ಭೀಕರ ಭೂಕಂಪಗಳು” ಸಂಭವಿಸುತ್ತವೆ ಎಂದು ಭವಿಷ್ಯ ನುಡಿದಿದ್ದರು. ಮಾರ್ಚ್ 28ರಂದು ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಅವರ ಮತ್ತೊಂದು ಭವಿಷ್ಯವಾದ ಆರ್ಥಿಕ ದುರಂತದ ಮುನ್ಸೂಚನೆಯು ನಿಜವಾಗುವ ಸಾಧ್ಯತೆ ಇದೆ ಎಂದು ಹಲವರು ನಂಬುತ್ತಿದ್ದಾರೆ.