ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಆಂಜನೇಯನ ಜನ್ಮಸ್ಥಳ ಎಂದೇ ಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರಿಗೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ.
ಬೇಸಿಗೆ ಹಾಗೂ ಬಿಸಿಲ ಝಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸಮಯ ನಿಗದಿ ಮಾಡಿ ಕೊಪ್ಪಳ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೆಟ್ಟ ಏರುವ ಭಕ್ತರು ಬಿಸಿಲಿನ ತಾಪದಿಂದ ಅಸ್ವಸ್ಥರಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೊಪ್ಪಳ ಜಿಲ್ಲಾಡಳಿತ, ಮಧ್ಯಾಹ್ನದ ವೇಳೆ ಬೆಟ್ಟ ಏರುವುದನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಮತ್ತು ಸಂಜೆ ನಾಲ್ಕು ಗಂಟೆಯ ಬಳಿಕ ಮಾತ್ರ ಭಕ್ತರಿಗೆ ಅಂಜನಾದ್ರಿ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೂ ಅತಿ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿರುವ ಅಂಜನಾದ್ರಿ ಪರ್ವತದಲ್ಲಿಯೂ ಬಿಸಿಲ ಝಳ ಹೆಚ್ಚಿದೆ. ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು, 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನ ಪಡೆಯಬೇಕಿದೆ. ಆದರೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಬೆಟ್ಟ ಏರುವ ಭಕ್ತರಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಿರ್ಜಲೀಕರಣ ಮತ್ತು ಸುಸ್ತಿನಿಂದಾಗಿ ಹಲವರು ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದಿದ್ದಾರೆ. ಕೆಲ ಭಕ್ತರಿಗೆ ಹೃದಯಾಘಾತವಾಗಿದೆ. ಇಂತಹ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಬೆಟ್ಟ ಏರಲು ಸಮಯ ನಿಗದಿ ಮಾಡಿದ್ದಾರೆ. ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಭಕ್ತರಿಗೆ ಬೆಟ್ಟ ಏರಲು ಪ್ರವೇಶ ನಿಷೇಧಸಲಾಗಿದೆ.
ಬೆಳಿಗ್ಗೆ 11 ಗಂಟೆಯೊಳಗೆ ಅಥವಾ ಸಂಜೆ 4 ಗಂಟೆಯ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತದ ಈ ನಿರ್ಧಾರವನ್ನು ಭಕ್ತರು ಕೂಡ ಸ್ವಾಗತಿಸಿದ್ದಾರೆ.

