ಹೈದರಾಬಾದ್: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ನೌಕಾಪಡೆಯ ಉದ್ಯೋಗಿಯೊಬ್ಬ ಆಕೆಯನ್ನು ಕೊಲೆಗೈದು, ಶವವನ್ನು ಫ್ರಿಡ್ಜ್ ನಲ್ಲಿ ತುಂಬಿಟ್ತಿದ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರದ ವಿಶಾಖಾಪಟ್ಟಣಂ ಜಿಲ್ಲೆಯ ಗಾಜುವಾಕದಲ್ಲಿ ಈ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಮೂಲದ ಆರೋಪಿ ರವೀಂದ್ರ ವಿವಾಹಿತ ಮಹಿಳೆಯನ್ನು ಕೊಲೆಗೈದು ಮೃತದೇಹ ಫ್ರಿಡ್ಜ್ ನಲ್ಲಿ ಇಟ್ಟವನು.
ನೌಕಾಪಡೆಯಲ್ಲಿ ಉದ್ಯೋಗಿಯಾಗಿದ್ದ ರವೀಂದ್ರನಿಗೆ ಇತ್ತೀಚೆಗೆ ಪತ್ನಿ ತವರು ಮನೆ ಸೇರಿದ್ದಳು. ಈ ವೇಳೆ ವಿವಾಹಿತ ಮಹಿಳೆ ಮೌನಿಕಾ (೨೮) ಪರಿಚಯವಾಗಿದೆ. ಆಕೆಯೊಂದಿಗೆ ಅಕ್ರಮ ಸಂಬಂಧವನ್ನೂ ಬೆಳೆಸಿದ್ದ. ಬರಬರುತ್ತಾ ಮೌನಿಕಾ ಹಣಕ್ಕಾಗಿ ಒತ್ತಡ ಹೇರಲಾರಂಭಿಸಿದ್ದಳು.
ಪತ್ನಿಯೂ ಊರಲ್ಲಿಲ್ಲ ಎಂದು ಮೌನಿಕಾಳನ್ನು ರವೀಂದ್ರ ಮನೆಗೆ ಕರೆದಿದ್ದಾನೆ. ಹೀಗೆ ಮನೆಗೆ ಬಂದ ಮೌನಿಕಾಳ ಜೊತೆ ಜಗಳವಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ಜೋರಾಗಿದೆ. ಈ ವೇಳೆ ಚಾಕುವಿನಿಂದ ಇರಿದು ಮೌನಿಕಾಳನ್ನು ಕೊಲೆ ಮಾಡಿದ್ದಾನೆ.
ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅರ್ಧಭಾಗವನ್ನು ಫ್ರಿಡ್ಜ್ ನಲ್ಲಿ ಹಾಗೂ ಇನ್ನುಳಿದ ಅರ್ಧಭಾಗವನ್ನು ಒಂದು ಬಂಡಲ್ ನಲ್ಲಿ ಸುತ್ತಿ ಮನೆಯ ಮತ್ತೊಂದು ಮೂಲೆಯಲ್ಲಿ ಇರಿಸಿದ್ದ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ್ತನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.

