ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯ ಬಂಗಾರ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಸಜ್ಜಾಗಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾಗವಹಿಸಲು ಅನಯ ಅವರಿಗೆ ಅವಕಾಶ ಕಲ್ಪಿಸಿದ್ದು, ಇದರೊಂದಿಗೆ ಅವರ ವೃತ್ತಿಪರ ಕ್ರಿಕೆಟ್ ಕನಸಿಗೆ ಹೊಸ ಜೀವ ಸಿಕ್ಕಂತಾಗಿದೆ. ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ನಂತರ ಕ್ರಿಕೆಟ್‌ಗೆ ಮರಳುತ್ತಿರುವ ಅವರು, ಮುಂಬರುವ ದಿನಗಳಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವ ದೊಡ್ಡ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನಯ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಲಿಂಗ ಪರಿವರ್ತಿತ ಕ್ರೀಡಾಪಟುಗಳಿಗಾಗಿ ಹೆಚ್ಚು ಒಳಗೊಳ್ಳುವಿಕೆಯ ಮತ್ತು ಗೌರವಯುತವಾದ ಸ್ಪಷ್ಟ ನೀತಿಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯ ಕ್ರಿಕೆಟರಂತೆ ನನಗೂ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವ ದೊಡ್ಡ ಕನಸಿದೆ ಮತ್ತು ಆ ಸಾಧನೆ ಮಾಡಲು ನಾನು ಶ್ರಮಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ತಮ್ಮ ಜೀವನದ ಕಠಿಣ ಹಂತವನ್ನು ನೆನಪಿಸಿಕೊಂಡ ಅನಯ, ಲಿಂಗ ಪರಿವರ್ತನೆ ನಿರ್ಧಾರದ ಸಮಯದಲ್ಲಿ ಸಮಾಜದಿಂದ ಮಾತ್ರವಲ್ಲದೆ ಕುಟುಂಬದೊಳಗಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದಿದ್ದಾರೆ. ಒಂದು ಹಂತದಲ್ಲಿ ಜೀವನ ನಿರ್ವಹಣೆಗಾಗಿ ಯುನೈಟೆಡ್ ಕಿಂಗ್‌ಡಮ್‌ನ ಕ್ರಿಕೆಟ್ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಸುಮಾರು ಐದು ತಿಂಗಳುಗಳ ಕಾಲ ದಿನ ಕಳೆಯಬೇಕಾದ ಪರಿಸ್ಥಿತಿ ಬಂದಿತ್ತು. ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬ್ರ್ಯಾಂಡ್ ಒಪ್ಪಂದಗಳನ್ನು ಪಡೆದುಕೊಂಡು ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಭರಿಸಿದ್ದಾಗಿ ಅವರು ತಿಳಿಸಿದ್ದಾರೆ.
ಸಾಕಷ್ಟು ಏಕಾಂಗಿತನ ಮತ್ತು ಸವಾಲುಗಳನ್ನು ಎದುರಿಸಿದರೂ, ಈ ಕಠಿಣ ಹಾದಿಯೇ ತಮ್ಮನ್ನು ಹೆಚ್ಚು ಧೈರ್ಯವಂತ ಮತ್ತು ಬಲಶಾಲಿಯನ್ನಾಗಿ ಮಾಡಿದೆ ಎಂದು ಅನಯ ಹೇಳಿದ್ದಾರೆ. ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರದಿಂದ ಹೊಸ ಭರವಸೆ ಪಡೆದಿರುವ ಅವರು, ಭವಿಷ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ವಿಶ್ವಾಸದಲ್ಲಿದ್ದಾರೆ.

