ಬಾಲಿವುಡ್ ನಟಿ ಅಮೀಶಾ ಪಟೇಲ್ ತಮ್ಮ ನೇರ ನುಡಿ ಹಾಗೂ ಖಡಕ್ ಸ್ವಭಾವಕ್ಕೆ ಹೆಸರಾದವರು. ಇದೀಗ ಅವರು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ಬಾಲಿವುಡ್‌ನ ಪ್ರಸಿದ್ಧ ನಟಿಯರು ನಡೆಸುತ್ತಿರುವ ‘ಫೇಕ್ ಪಿಆರ್’ ಆಟದ ಬಗ್ಗೆ ಗಂಭೀರ ಆರೋಪ ಮಾಡುವ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.
ಶನಿವಾರ ಮುಂಜಾನೆ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಅಮೀಶಾ, ಇಂದು ಅನೇಕ ನಟಿಯರು ಹಣ ನೀಡಿ ತಮ್ಮನ್ನು ತಾವು ‘ನಂಬರ್ 1’ ನಟಿ ಅಥವಾ ‘ಸೂಪರ್ ಸ್ಟಾರ್’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 200 ಕೋಟಿ ರೂಪಾಯಿ ಗಳಿಸುವ ಒಂದು ಚಿತ್ರವನ್ನೂ ನೀಡದ ನಟಿಯರು ಪಿಆರ್ ತಂಡಗಳ ಮೂಲಕ ಟಾಪ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಈಗ 2026ನೇ ವರ್ಷವಾಗಿದ್ದು, 100 ಕೋಟಿ ಗಳಿಕೆ ಮಾಡುವುದು ದೊಡ್ಡ ಸಾಧನೆಯಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸುವಂತಹ ಅಥವಾ ಭಾರಿ ಯಶಸ್ಸು ತರುವಂತಹ ಕೆಲಸ ಮಾಡಿದರೆ ಮಾತ್ರ ನಿಮ್ಮನ್ನು ಸೂಪರ್ ಸ್ಟಾರ್ ಎಂದು ಕರೆದುಕೊಳ್ಳಿ. ಅಲ್ಲಿಯವರೆಗೆ ಇಂತಹ ಸುಳ್ಳು ಪ್ರಚಾರದ ಆಟಗಳನ್ನು ನಿಲ್ಲಿಸಿ ಎಂದು ಅವರು ನಟಿಯರಿಗೆ ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ಸೂಪರ್ ಸ್ಟಾರ್ ಎಂದರೆ ವಿಶ್ವದಾದ್ಯಂತ ಬ್ಲಾಕ್‌ಬಸ್ಟರ್ ಹಿಟ್ ನೀಡುವವರೇ ಹೊರತು ಪ್ರತಿ ವರ್ಷ ಕೆಲವು ಸರಾಸರಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವವರಲ್ಲ ಎಂಬುದು ಅವರ ವಾದ.
ತಮ್ಮ ವೃತ್ತಿಜೀವನದ ಮೈಲಿಗಲ್ಲುಗಳಾದ ‘ಕಹೋ ನಾ ಪ್ಯಾರ್ ಹೈ’, ‘ಗದರ್’ ಮತ್ತು ಇತ್ತೀಚಿನ ‘ಗದರ್ 2’ ಚಿತ್ರಗಳನ್ನು ಉದಾಹರಣೆಯಾಗಿ ನೀಡಿದ ಅಮೀಶಾ, ಇವು ನಟಿಯೊಬ್ಬರ ನೇತೃತ್ವದಲ್ಲಿ ಮೂಡಿಬಂದ ಅತಿ ದೊಡ್ಡ ಸೋಲೋ ಬ್ಲಾಕ್‌ಬಸ್ಟರ್‌ಗಳು ಎಂದಿದ್ದಾರೆ. ಇತರ ನಟಿಯರಿಗೆ ಹೋಲಿಸಿದರೆ ತಮ್ಮ ಪಿಆರ್ ತಂಡ ದುರ್ಬಲವಾಗಿರಬಹುದು, ಆದರೆ ತಮ್ಮ ಸಾಧನೆಗಳು ಸುಳ್ಳಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ ‘ಗದರ್ 3’ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಈ ಸಿನಿಮಾ ಬಿಡುಗಡೆಯಾದಾಗ ಕನಿಷ್ಠ 500 ಕೋಟಿ ರೂಪಾಯಿ ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

