ದಾವಣಗೆರೆ: ಜೀರೋ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಮೂಲಕ ದಾವಣಗೆರೆಯಿಂದ ಮಣಿಪಾಲ್ ಗೆ ಕರೆದೊಯ್ಯುತ್ತಿದ್ದ ಮೂರು ತಿಂಗಳ ಮಗು ಮೃತಪಟ್ಟಿದೆ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮೂರು ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಜಿರೋ ಟ್ರಾಫಿಕ್ ನಲ್ಲಿ ಸಾಗಿಸುವ ಪ್ರಯತ್ನ ವ್ಯರ್ಥವಾಗಿದೆ. ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಉಡುಪಿಯ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಗುರುವಾರ ರಾತ್ರಿ ಮಗುವನ್ನು ಕಳುಹಿಸಿಕೊಡಲಾಯಿತಾದರೂ ಮಗು ಬದುಕುಳಿಯಲಿಲ್ಲ.
ದಾವಣಗೆರೆ ಜಿಲ್ಲೆ ಹರಿಹರ ಮೂಲದ ಪಲ್ಲವಿ ಅವರನ್ನು ಕೊಪ್ಪಳದ ಹನುಮೇಶ್ವರ ಅವರಿಗೆ ವಿವಾಹ ಮಾಡಿಕೊಡಲಾಗಿದ್ದು, ದಂಪತಿಯ ಮೂರು ತಿಂಗಳು 26 ದಿನದ ಮಗು ಅನ್ವಿಕಾಗೆ ವಿಪರೀತ ಜ್ವರ ಬಂದ ಹಿನ್ನೆಲೆಯಲ್ಲಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕು ಪತ್ತೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದಾರೆ.
ಮಗುವನ್ನು ಆಂಬುಲೆನ್ಸ್ ನಲ್ಲಿ ಜಿರೋ ಟ್ರಾಫಿಕ್ ನಲ್ಲಿ ಕಳುಹಿಸಲು ನಿರ್ಧರಿಸಿದ್ದು, ದಾವಣಗೆರೆ, ಶಿವಮೊಗ್ಗ, ಉಡುಪಿ ಪೊಲೀಸರು ವ್ಯವಸ್ಥೆ ಕೈಗೊಂಡಿದ್ದರು. ವೈದ್ಯರ ತಂಡದೊಂದಿಗೆ ಆಂಬುಲೆನ್ಸ್ ನಲ್ಲಿ ಹೋಗುವಾಗ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ಆಂಬುಲೆನ್ಸ್ ಟೈರ್ ಪಂಕ್ಚರ್ ಆಗಿದೆ. ಕೂಡಲೇ ಜೊತೆಯಲ್ಲಿದ್ದ ಪೊಲೀಸರು ಟೈಯರ್ ಬದಲಿಸಿದ್ದಾರೆ. ಈ ವೇಳೆ ಮಗುವಿನ ಪಲ್ಸ್ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ವೈದ್ಯರ ತಂಡ ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಕಂದನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವನ್ನು ಜೀರೋ ಟ್ರಾಫಿಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವಿಶೇಷ ಆಂಬುಲೆನ್ಸ್ ನಲ್ಲಿಯೇ ಮೃತದೇಹವನ್ನು ಹರಿಹರಕ್ಕೆ ಸಾಗಿಸಲಾಗಿದೆ.

