ಬೆಂಗಳೂರು : ಆನ್‌ಲೈನ್ ಮೂಲಕ ವಿಷಕಾರಿ ಧತ್ತೂರಿ (Datura) ಹಣ್ಣು ಹಾಗೂ ಬೀಜಗಳನ್ನು ಆಹಾರ/ಮಾನವ ಸೇವನೆಗಾಗಿ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. Amazon, Swiggy InstaMart ಹಾಗೂ BigBasketಗೆ ನೀಡಲಾಗಿದ್ದ ಆಹಾರ ಪರವಾನಿಗೆಗಳನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಹಾಗೂ ನ್ಯಾಯ ನಿರ್ಣಾಯಕಾಧಿಕಾರಿಗಳ ನ್ಯಾಯಾಲಯವು ಆಗಸ್ಟ್ 24ರಂದು ಈ ಆದೇಶ ಹೊರಡಿಸಿದೆ.
ಏನಿದು ಪ್ರಕರಣ?
Amazon, Swiggy InstaMart, BigBasket ಸೇರಿದಂತೆ ವಿವಿಧ ಇ-ಕಾಮರ್ಸ್ ವೇದಿಕೆಗಳಲ್ಲಿ ಧತ್ತೂರಿ ಹಣ್ಣು ಹಾಗೂ ಬೀಜಗಳನ್ನು ಆಹಾರ/ಮಾನವ ಸೇವನೆಗಾಗಿ ಮಾರಾಟಕ್ಕೆ ಪ್ರದರ್ಶಿಸಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಕೆಲವು ಉತ್ಪನ್ನಗಳ ಪ್ಯಾಕೆಟ್‌ಗಳಲ್ಲಿ FSSAI ಪರವಾನಿಗೆ/ನೋಂದಣಿ ಸಂಖ್ಯೆ ನಮೂದಿಸಿರುವುದು ಕೂಡ ತಪಾಸಣೆ ವೇಳೆ ಕಂಡುಬಂದಿತ್ತು.
ಧತ್ತೂರಿ ಹಣ್ಣು ಹಾಗೂ ಬೀಜಗಳು ವಿಷಕಾರಿ ಗುಣ ಹೊಂದಿದ್ದು, ಸೇವಿಸಿದರೆ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಉತ್ಪನ್ನಗಳನ್ನು ಆಹಾರವಾಗಿ ಮಾರಾಟ, ವಿತರಣೆ ಅಥವಾ ಆನ್‌ಲೈನ್‌ನಲ್ಲಿ ಪ್ರಚಾರ ಮಾಡುವುದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ಇಲಾಖೆ ಪರಿಗಣಿಸಿದೆ.
ಆಗಸ್ಟ್ 24ರಂದು ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಉದ್ದಿಮೆದಾರರಿಗೆ ವಿಚಾರಣಾ ನೋಟಿಸ್ ಜಾರಿ ಮಾಡಲಾಗಿತ್ತು. ಆಗಸ್ಟ್ 24ರಂದು ಸಂಬಂಧಪಟ್ಟ ಪ್ರತಿನಿಧಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
Amazon ಯಾವುದೇ ಉತ್ತರ ಸಲ್ಲಿಸಿಲ್ಲ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. Swiggy InstaMart ನೋಟಿಸ್‌ಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ದಾಖಲೆಗಳನ್ನು ಸಲ್ಲಿಸದೆ, ದಾಖಲೆ ನೀಡಲು ಸಮಯಾವಕಾಶ ಕೋರಿದೆ.
ಇನ್ನು BigBasket ಧತ್ತೂರಿ ಹಣ್ಣು ಮಾರಾಟವಾಗುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದೆ. ಮುಂದಿನ ದಿನಗಳಲ್ಲಿ ಮಾರಾಟ ವಿಧಾನವನ್ನು ಸರಿಪಡಿಸಿ, ಉತ್ಪನ್ನದ ಮೇಲೆ “NOT FOR HUMAN CONSUMPTION” ಎಂದು ಸ್ಪಷ್ಟವಾಗಿ ಲೇಬಲ್ ಮಾಡುವುದಾಗಿ ತಿಳಿಸಿದೆ.
ಆನ್‌ಲೈನ್ ಲಿಸ್ಟಿಂಗ್ ತಕ್ಷಣ ತೆಗೆದುಹಾಕಲು ಆದೇಶ
ಧತ್ತೂರಿ ಹಣ್ಣು/ಬೀಜಗಳನ್ನು ಆಹಾರ ಅಥವಾ ಮಾನವ ಸೇವನೆಗಾಗಿ ಮಾರಾಟ ಮಾಡುವುದು, ವಿತರಿಸುವುದು, ಮಾರಾಟಕ್ಕಾಗಿ ಪ್ರದರ್ಶಿಸುವುದು ಹಾಗೂ ಆನ್‌ಲೈನ್‌ನಲ್ಲಿ ಜಾಹೀರಾತು/ಲಿಸ್ಟಿಂಗ್ ಮಾಡುವುದು ತಕ್ಷಣ ಸ್ಥಗಿತಗೊಳಿಸುವಂತೆ ಇಲಾಖೆ ಆದೇಶಿಸಿದೆ.
ಮುಂದಿನ ದಿನಗಳಲ್ಲೂ ಇವುಗಳನ್ನು ಆಹಾರ ಅಥವಾ ಮಾನವ ಸೇವನೆಗಾಗಿ ಮಾರಾಟ ಮಾಡದಂತೆ ಸಂಬಂಧಪಟ್ಟ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪರವಾನಿಗೆ ಅಮಾನತಿಗೆ ಸೂಚನೆ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ನಿಯಮಗಳು 2011ರ ಅನ್ವಯ Amazon, Swiggy InstaMart ಮತ್ತು BigBasketಗೆ ನೀಡಿರುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಆಹಾರ ಪರವಾನಿಗೆಗಳನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸುವಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ.
ಅಲ್ಲದೆ, ಈ ಆನ್‌ಲೈನ್ ಸಂಸ್ಥೆಗಳಿಗೆ ಧತ್ತೂರ ಹಣ್ಣು/ಬೀಜಗಳನ್ನು ಸರಬರಾಜು ಮಾಡುತ್ತಿರುವ ಸಂಸ್ಥೆಗಳು ಹಾಗೂ ಮಾರಾಟಗಾರರ ಪರವಾನಿಗೆ/ನೋಂದಣಿಯನ್ನೂ ತಕ್ಷಣದಿಂದ ಅಮಾನತುಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿದರೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

