ಬೆಂಗಳೂರು: ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಕಳೆದ ವಾರ ಆಹಾರ ಇಲಾಖೆ ನಡೆಸಿದ ದಾಳಿಗಳಲ್ಲಿ ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ.
ಅಮೆಜಾನ್ ಡಾರ್ಕ್ ಸ್ಟೋರ್, ಲಿಯೋ ಸಂಸ್ಥೆಯ ಡಾರ್ಕ್ ಸ್ಟೋರ್ ಗಳು ಸೇರಿದಂತೆ ವಿವಿಧ ಇ-ಕಾಮರ್ಸ್ ಸಂಸ್ಥೆಗಳ ಸ್ಟೋರ್ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಅಪಾರ ಪ್ರಮಾಣದ ಎಕ್ಸ್ ಪೈರಿ ವಸ್ತುಗಳು ಲಭ್ಯವಾಗಿವೆ.
ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ ಖಾದರ್ ಮಾಹಿತಿ ನೀಡಿದ್ದಾರೆ.ಇ-ಕಾಮರ್ಸ್ ಮೂಲಕ ಔಷಧ ಮಾರಾಟದ ಮೇಲೆ ನಡೆಸಿದ ದಾಳಿಯ ವೇಳೆ, ಡಾರ್ಕ್ ಸ್ಟೋರ್‌ಗಳಲ್ಲಿ 45 ಲಕ್ಷ ರೂ. ಮೌಲ್ಯದ ಎಕ್ಸ್ಪೈರಿ ಔಷಧ ಸಂಗ್ರಹ ಪತ್ತೆಯಾಗಿದೆ. ಹೊಸಕೋಟೆಯಲ್ಲಿ ಈ ಔಷಧಗಳಿಗೆ ರಿಲೇಬಲಿಂಗ್ ಮಾಡಲಾಗುತ್ತಿತ್ತು. ಅಧಿಕಾರಿಗಳು ಈ ಔಷಧಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪೆಪ್ ಟೈಡ್ ಪಾರ್ಟಿ ಬಗ್ಗೆಯೂ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಬಂದ ನಂತರ, ಇಲಾಖೆಯು ತನಿಖೆ ನಡೆಸಿತು. ಸಂಘಟಕರು ತಾವು ಎಲೈಟ್ ವರ್ಗಕ್ಕೆ ಹೊಸ ಪೌಷ್ಟಿಕಾಂಶ ಮತ್ತು ಫಾರ್ಮಾಸ್ಯುಟಿಕಲ್ ಐಟಂಗಳನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದರು. ಈ ಐಟಂಗಳು ಅಮೆಜಾನ್‌ನ ಡಾರ್ಕ್ ಸ್ಟೋರ್‌ಗಳಿಂದ ಬಂದಿವೆ ಎಂದು ಅವರು ಒಪ್ಪಿಕೊಂಡರು. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಮಂಗಳೂರಿನ 7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಜಿಲ್ಲೆಯ ಏಳು ಗ್ರಾಮ ಪಂಚಾಯಿತಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು, ವಿವಿಧ ತಾಲೂಕುಗಳ ಒಟ್ಟು 7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಸಾರ್ವಜನಿಕರಿಂದ ಸರಣಿ ಭ್ರಷ್ಟಾಚಾರ, ಖಾತಾ ಬದಲಾವಣೆ, ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಸಾರ್ವಜನಿಕ ಕೆಲಸಗಳಲ್ಲಿ ಅಕ್ರಮ ಮತ್ತು ಲಂಚದ ಬೇಡಿಕೆ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆದಿದೆ.
ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತಿ, ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ, ಮಾಣಿ ಗ್ರಾಮ ಪಂಚಾಯತಿ, ಗೊಳ್ತಮಜಲು ಗ್ರಾಮ ಪಂಚಾಯತಿ, ಪಾಣೆಮಂಗಳೂರು, ಅಡ್ಯಾರ್ ಗ್ರಾಮ ಪಂಚಾಯತಿ, ಕುವೆಟ್ಟು ಗ್ರಾಮ ಪಂಚಾಯತಿ, ಮಡಂತ್ಯಾರ್ ಗ್ರಾಮ ಪಂಚಾಯತಿ, ಕಾರವಾರ, ಉಡುಪಿ ಹಾಗೂ ಮಂಗಳೂರು ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ದಾಳಿ ನಡೆಸಲಾಗಿದೆ.
ಕಚೇರಿಯಲ್ಲಿದ್ದ ಪ್ರಮುಖ ಕಡತಗಳು, ಸಾರ್ವಜನಿಕರ ಅರ್ಜಿ ವಿಲೇವಾರಿ ರಿಜಿಸ್ಟರ್, ತೆರಿಗೆ ವಸೂಲಾತಿ, ನಿರ್ಮಾಣ ಪರವಾನಗಿ ಹಾಗೂ ೧೫ನೇ ಹಣಕಾಸು ಯೋಜನೆಗಳ ಅನುದಾನ ಬಳಕೆಯ ಕಡತಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ.
ಸಾರ್ವಜನಿಕರಿಂದ ಸಾಲು ಸಾಲು ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ಈ ಬಗ್ಗೆ ಪಂಚಾಯತ್ ಅಧಿಕಾರಿ, ಸಿಬ್ಬಂದಿಗಳಿಂದ ವಿಚಾರಿಸಿ ಮಾಹಿತಿ ಪಡೆಯಲಾಗಿದೆ.

