ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದ ಮೊದಲ ವರ್ಷದ ಹುಟ್ಟುಹಬ್ಬದ ಆಚರಣೆಯೊಂದು ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ತನ್ನ ಪ್ರೀತಿಯ ಅಳಿಯನ ಮೊದಲ ವರ್ಷದ ಜನ್ಮದಿನಕ್ಕೆ ಮಾವ ನೀಡಿರುವ ಉಡುಗೊರೆಗಳ ಪಟ್ಟಿ ಕೇಳಿದರೆ ನೀವು ಖಂಡಿತವಾಗಿಯೂ ಹುಬ್ಬೇರಿಸುತ್ತೀರಿ. ಈ ಅದ್ದೂರಿ ಉಡುಗೊರೆಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಬಂಗಾರ, ಬೆಳ್ಳಿ ಮತ್ತು ಬೃಹತ್ ಆಸ್ತಿ ಅಖಿಲೇಶ್ ಚೌಹಾಣ್ ಎಂಬುವವರು ತಮ್ಮ ಅಳಿಯ ಶಿವಾಯ್ ಹುಟ್ಟುಹಬ್ಬಕ್ಕೆ ನೀಡಿದ ಉಡುಗೊರೆಗಳ ಪಟ್ಟಿಯನ್ನು ಅರ್ಚಕರೊಬ್ಬರು ಮೈಕ್‌ನಲ್ಲಿ ಓದುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಮಗುವಿಗೆ ಅಲಿಗಢ-ಆಗ್ರಾ ಹೆದ್ದಾರಿಯ ಸಮೀಪವಿರುವ ಒಂದು ಪ್ಲಾಟ್ (ಸೈಟ್), 11 ಲಕ್ಷ ರೂಪಾಯಿ ನಗದು, 20 ಗ್ರಾಂ ತೂಕದ ಚಿನ್ನದ ಸರ, 500 ಗ್ರಾಂ ತೂಕದ ಐದು ಬೆಳ್ಳಿ ಪಾತ್ರೆಗಳು ಮತ್ತು ಬೆಳ್ಳಿಯ ವಿಗ್ರಹಗಳನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಮಗುವಿಗೆ 15 ಜೋಡಿ ಬಟ್ಟೆಗಳು ಮತ್ತು ರಾಶಿ ರಾಶಿ ಆಟಿಕೆಗಳನ್ನು ಮಾವ ತಂದಿದ್ದಾರೆ.
ಕುಟುಂಬದವರಿಗೂ ಬಂಪರ್ ಕೊಡುಗೆ ಮಾವನ ಉದಾರತೆ ಕೇವಲ ಮಗುವಿಗೆ ಮಾತ್ರ ಸೀಮಿತವಾಗಿಲ್ಲ. ಮಗುವಿನ ತಾಯಿಗೆ 35 ಗ್ರಾಂ ತೂಕದ ಚಿನ್ನದ ಹಾರ, ಚಿನ್ನದ ಬಳೆಗಳು ಮತ್ತು ಉಂಗುರವನ್ನು ನೀಡಲಾಗಿದೆ. ಮಗುವಿನ ಅಜ್ಜಿ ಮತ್ತು ಅತ್ತೆಗೂ ಚಿನ್ನದ ಉಂಗುರ ಹಾಗೂ ಬಟ್ಟೆಗಳನ್ನು ನೀಡಲಾಗಿದೆ. ಇಷ್ಟೇ ಅಲ್ಲದೆ, ಕುಟುಂಬದ ಇತರ ಮಹಿಳೆಯರಿಗಾಗಿ 101 ಸೀರೆಗಳು ಮತ್ತು ಪುರುಷರಿಗಾಗಿ 101 ಪ್ಯಾಂಟ್-ಶರ್ಟ್ ಸೆಟ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
ನೆಟ್ಟಿಗರ ತಮಾಷೆಯ ಕಾಮೆಂಟ್ ಗಳ ಸುರಿಮಳೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. “ನಮ್ಮ ಮಾವ ನನ್ನ ಹತ್ತಿರವೇ ಉಡುಗೊರೆ ಕೇಳುತ್ತಾರೆ, ಇಂತಹ ಮಾವ ಎಲ್ಲರಿಗೂ ಸಿಗಲಿ” ಎಂದು ಕೆಲವರು ಬರೆದರೆ, “ಈ ವಿಡಿಯೋ ನೋಡುತ್ತಿರುವ ನಮಗೇನಾದರೂ ಉಡುಗೊರೆ ಇದೆಯೇ?” ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. “ಇಷ್ಟು ಶ್ರೀಮಂತರಾಗುವುದೇ ನನ್ನ ಜೀವನದ ಗುರಿ” ಎಂಬ ಕಾಮೆಂಟ್ ಗಳು ಲೈಕ್ ಗಿಟ್ಟಿಸಿಕೊಳ್ಳುತ್ತಿವೆ. ಇನ್ನು ಕೆಲವರು “ನನ್ನ ತಂಗಿ ಈ ವಿಡಿಯೋ ನೋಡಬಾರದು, ನೋಡಿದರೆ ನನ್ನ ಕಥೆ ಮುಗಿಯಿತು” ಎಂದು ತಮಾಷೆ ಮಾಡಿದ್ದಾರೆ.
ಒಟ್ಟಾರೆಯಾಗಿ, ಅಳಿಯನ ಮೇಲಿನ ಪ್ರೀತಿಯಿಂದ ಮಾವ ನೀಡಿದ ಈ ಅದ್ದೂರಿ ಕಾಣಿಕೆಗಳು ಈಗ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿವೆ.
https://www.instagram.com/reel/DUQs3w_kxat/?utm_source=ig_web_copy_link

