ಕುಡಿದು ವಾಹನ ಚಲಾಯಿಸುವುದು ಎಷ್ಟು ಅಪಾಯಕಾರಿ ಎಂದು ತಿಳಿದಿದ್ದರೂ ಕೆಲವರು ಮಾತ್ರ ತಮ್ಮ ದುರಭ್ಯಾಸವನ್ನು ಮುಂದುವರೆಸುತ್ತಾರೆ. ಇಂತಹದ್ದೇ ಒಂದು ಆಘಾತಕಾರಿ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅತಿಯಾಗಿ ಕುಡಿದಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಬೈಕ್‌ನಿಂದ ಬಿದ್ದರೂ ಕಿಲೋಮೀಟರ್‌ಗಟ್ಟಲೆ ಮುಂದೆ ಹೋಗುತ್ತಿರುವುದು ಕಂಡುಬಂದಿದೆ.
ಡೈಲಿ ಭಾರತ್ ನ್ಯೂಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೂರು ದಿನಗಳ ಹಿಂದೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ ಕುಡಿದ ಅಮಲಿನಲ್ಲಿರುವ ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯಲ್ಲಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿರುವುದು ಸೆರೆಯಾಗಿದೆ.
ಮೊದಲಿಗೆ ಬೈಕ್ ಚಾಲಕ ನಿಯಂತ್ರಣ ತಪ್ಪಿ ಅಲುಗಾಡುತ್ತಿರುವುದು ಮತ್ತು ಎಲೆಕ್ಟ್ರಿಕ್ ರಿಕ್ಷಾ ಹಾಗೂ ಎದುರಿನಿಂದ ಬರುತ್ತಿದ್ದ ಟ್ರಕ್‌ನ ನಡುವೆ ಸಿಲುಕುವ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗುತ್ತಿರುವುದು ಕಾಣಿಸುತ್ತದೆ. ಆತ ತನ್ನ ಕಾಲುಗಳಿಂದ ಬೈಕ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವಾಗಲೇ ಹಿಂಬದಿ ಸವಾರಳಾಗಿದ್ದ ಪತ್ನಿ ಬೈಕ್‌ನಿಂದ ಕೆಳಗೆ ಬೀಳುತ್ತಾಳೆ. ಆದರೆ ಅಚ್ಚರಿಯೆಂದರೆ, ಆ ಕುಡುಕ ಗಂಡ ಮಾತ್ರ ಏನೂ ಆಗಿಲ್ಲ ಎಂಬಂತೆ ಮುಂದೆ ಸಾಗುತ್ತಾನೆ. ಪತ್ನಿ ಮಾತ್ರ ಆಘಾತದಿಂದ ಮಾತನಾಡದೆ ತನ್ನ ಗಂಡನನ್ನು ನೋಡುತ್ತಾ ನಿಂತುಕೊಳ್ಳುತ್ತಾಳೆ. ವಿಡಿಯೋದುದ್ದಕ್ಕೂ ಅವರ ಮಗು ಹಿಂದಿರುಗಿ ತನ್ನ ತಾಯಿಯನ್ನು ನೋಡುತ್ತಿರುತ್ತಾನೆ, ಆದರೆ ತನ್ನ ತಂದೆಗೆ ಈ ವಿಷಯ ತಿಳಿಸುವುದಿಲ್ಲ.
ಈ ಘಟನೆಯನ್ನು ಚಿತ್ರೀಕರಿಸಲಾಗಿರುವುದರಿಂದ ಇದು ಪೂರ್ವನಿಯೋಜಿತವಾಗಿ ಸೃಷ್ಟಿಸಲಾದ ವಿಡಿಯೋ ಇರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರನೊಬ್ಬ ತಡೆದ ನಂತರವಷ್ಟೇ ಆ ವ್ಯಕ್ತಿಗೆ ವಿಷಯ ತಿಳಿದಿದೆ. ಅಷ್ಟರಲ್ಲಿ ರಸ್ತೆಯಲ್ಲಿದ್ದ ಅನೇಕ ಜನರು ಆತನಿಗೆ ಪರಿಸ್ಥಿತಿಯನ್ನು ವಿವರಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, “ನಾವು ಇದನ್ನು ನೋಡಿ ನಗುತ್ತಿದ್ದೇವೆ, ಆದರೆ ವಾಸ್ತವವಾಗಿ ಹಿಂಬದಿಯ ಮಗು ಮತ್ತು ಅಲ್ಲಿಯೇ ಬಿಟ್ಟು ಹೋದ ಮಹಿಳೆ ಬಗ್ಗೆ ಚಿಂತಿಸಬೇಕಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, “ಮಗುವಿನ ಬಗ್ಗೆಯೂ ಕಾಳಜಿ ಇಲ್ಲದ ಈತ ಎಷ್ಟು ನಿರ್ಲಕ್ಷ್ಯದ ವ್ಯಕ್ತಿ. ಒಳ್ಳೆಯ ಕೆಲಸ ಮಾಡಿದ ಜನರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ಪ್ರತಿಕ್ರಿಯಿಸಿದ್ದಾರೆ.