ಬಾಲಿವುಡ್ನ ಅತ್ಯಂತ ಜನಪ್ರಿಯ ಕಾಮಿಡಿ ಚಲನಚಿತ್ರ ಸರಣಿಗಳಲ್ಲಿ ಒಂದಾದ ‘ಧಮಾಲ್’ ಸರಣಿಯ ಮುಂದಿನ ಭಾಗವಾದ ‘ಧಮಾಲ್ ೪’ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ಗಳನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಪೋಸ್ಟರ್ಗಳ ಮೂಲಕ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ತಾರಾಬಳಗವನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗಿದ್ದು, ಸಿನಿಮಾ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಈ ಬಾರಿ ಚಿತ್ರದಲ್ಲಿ ಬಾಲಿವುಡ್ ಸಿಂಗಂ ಅಜಯ್ ದೇವಗನ್ ಅವರೊಂದಿಗೆ ಹಳೆಯ ಸರಣಿಗಳ ಖಾಯಂ ಕಲಾವಿದರಾದ ರಿತೇಶ್ ದೇಶ್ಮುಖ್, ಅರ್ಷದ್ ವಾರ್ಸಿ, ಜಾವೇದ್ ಜಾಫೆರಿ ಮತ್ತು ಸಂಜಯ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಈಶಾ ಗುಪ್ತಾ, ಸಂಜೀದಾ ಶೇಖ್, ಅಂಜಲಿ ಆನಂದ್, ಉಪೇಂದ್ರ ಲಿಮಾಯೆ, ವಿಜಯ್ ಪಾಟ್ಕರ್ ಹಾಗೂ ಹಿರಿಯ ನಟ ರವಿ ಕಿಶನ್ ಈ ಹೊಚ್ಚ ಹೊಸ ಸರಣಿಯ ಭಾಗವಾಗಿದ್ದಾರೆ.
ಸಂಪೂರ್ಣ ಕೌಟುಂಬಿಕ ಮನರಂಜನಾ ಚಿತ್ರವಾಗಿ ಮೂಡಿಬರುತ್ತಿರುವ ‘ಧಮಾಲ್ ೪’ ಈ ವರ್ಷದ ಅತಿ ದೊಡ್ಡ ಕಾಮಿಡಿ ಸಿನಿಮಾಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದೆ. ಈ ಸರಣಿಯು ಮೊದಲಿನಿಂದಲೂ ತನ್ನ ವಿಶಿಷ್ಟ ಹಾಸ್ಯ ಪ್ರಸಂಗಗಳು, ವಿಲಕ್ಷಣ ಪಾತ್ರಗಳು ಮತ್ತು ಹೊಟ್ಟೆ ಹುಣ್ಣಾಗಿಸುವ ಸನ್ನಿವೇಶಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಬಿಡುಗಡೆಯಾಗಿರುವ ಕ್ಯಾರೆಕ್ಟರ್ ಪೋಸ್ಟರ್ಗಳು ಕೂಡ ಇದೇ ರೀತಿಯ ಸಖತ್ ಫನ್ನಿ ಮನರಂಜನೆಯನ್ನು ನೆನಪಿಸುವಂತಿವೆ. ಚಿತ್ರದಲ್ಲಿನ ಪ್ರತಿಯೊಂದು ಪಾತ್ರವೂ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಖ್ಯಾತ ನಿರ್ದೇಶಕ ಇಂದ್ರ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರವನ್ನು ಗುಲ್ಶನ್ ಕುಮಾರ್ ಅವರ ಟಿ-ಸೀರೀಸ್ ಪ್ರೆಸೆಂಟ್ಸ್ ಮತ್ತು ದೇವಗನ್ ಫಿಲ್ಮ್ಸ್ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ. ಟಿ-ಸೀರೀಸ್ ಫಿಲ್ಮ್ಸ್, ಮಾರುತಿ ಇಂಟರ್ನ್ಯಾಷನಲ್ ಮತ್ತು ಪನೋರಮಾ ಸ್ಟುಡಿಯೋಸ್ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹೂಡಿವೆ. ಅಜಯ್ ದೇವಗನ್, ಭೂಷಣ್ ಕುಮಾರ್, ಕೃಷ್ಣ ಕುಮಾರ್, ಆನಂದ್ ಪಂಡಿತ್ ಸೇರಿದಂತೆ ಪ್ರಮುಖರು ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಸದ್ಯ ಕ್ಯಾರೆಕ್ಟರ್ ಪೋಸ್ಟರ್ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ‘ಧಮಾಲ್ ೪’ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಹಳೇ ನಟರ ಜುಗಲ್ಬಂದಿ ಹಾಗೂ ಹೊಸ ಕಲಾವಿದರ ಸೇರ್ಪಡೆಯಿಂದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವ ಮುನ್ಸೂಚನೆ ನೀಡಿದೆ.

