“ರಾಜ್ಯದಲ್ಲಿ ಈ ವರ್ಷ ಹೊಸದಾಗಿ 120 ಸೇತುವೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ” ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಕಲಭಾಗದಲ್ಲಿ 30 ಗುಂಡಿ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಮಾಡಿ ಸಚಿವರು ಮಾತನಾಡಿದರು. “ಕರಾವಳಿ ಮತ್ತು ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗದ ಸಂಪರ್ಕ ಕಡಿತವಾಗುತ್ತದೆ” ಎಂದರು.
“ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಒದಗಿಸಲು ಈಗಾಗಲೇ 12 ಜಿಲ್ಲೆಗಳಲ್ಲಿ 400 ಕಾಲು ಸಂಕ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಹೆಚ್ಚಿನ ಸಂಖ್ಯೆಯ ಕಾಲ ಸಂಕಗಳನ್ನು ನಿರ್ಮಾಣ ಮಾಡಲಾಗುವುದು” ಎಂದು ಹೇಳಿದರು.
“ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ, ಕುಮಟಾ ಹೊನ್ನಾವರ ಭಾಗದಲ್ಲಿ ಹೆಚ್ಚಿನ ಕಾಲು ಸಂಕಗಳನ್ನು ನಿರ್ಮಾಣ ಮಾಡಲಾಗಿದ್ದು, ಅವಶ್ಯವಿರುವ ಕಡೆ ಕಾಲು ಸಂಕ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
“ಶಿಥಿಲಾವಸ್ಥೆಯಲ್ಲಿರುವ ಹಳೆ ಸೇತುವೆಗಳಿಗೆ ತಕ್ಷಣವೇ ಸೇತುವೆ ಮರು ನಿರ್ಮಾಣ ಮಾಡಲು ಮಂಜೂರಾತಿ ನೀಡುತ್ತಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ನದಿಯ ಹಿನ್ನಿರಿಗೆ ಸಮುದ್ರದ ಉಪ್ಪು ನೀರು ಮಿಶ್ರಣವಾಗುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ” ಎಂದು ತಿಳಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, “ಬಹಳ ವರ್ಷದಿಂದ ಈ ಸೇತುವೆ ಆಗಬೇಕು ಎಂಬುದು ಈ ಭಾಗದ ಜನತೆಯ ಕನಸಾಗಿತ್ತು. ಈ ಸೇತುವೆ ಬಗ್ಗೆ ಸೇತುವೆ ಅಗಲೀಕರಣಕ್ಕೆ ಸಚಿವರಲ್ಲಿ ಮನವಿ ಸಲ್ಲಿಸಿದ ತಕ್ಷಣ ಸ್ಪಂದಿಸಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಸೇತುವೆ ಮಾಡಲು ಮಂಜೂರಾತಿ ನೀಡಿದರು” ಎಂದರು.
“3 ಮೀಟರ್ ಇದ್ದ ಸೇತುವೆಯನ್ನು 9 ಮೀಟರ್ಗೆ ಅಗಲೀಕರಣ ಮಾಡಲಾಗುತ್ತಿದೆ. ಇದರ ಜೊತೆ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ಉಪ್ಪು ನೀರು ರೈತರ ಗದ್ದೆಗೆ ಹೋಗದಂತೆ ತಡೆದು ರೈತರಿಗೆ ಅನುಕೂಲ ಮಾಡಲಾಗುತ್ತಿದೆ” ಎಂದು ಹೇಳಿದರು.

