ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಜೆ.ಸಿ.ಡಿ.ಪ್ರಭಾಕರ್ ಅವರನ್ನು ಭೇಟಿಯಾಗಿ ಮೂವರು ಶಾಸಕರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಮಧುರಾಂತಕಂ ಕ್ಷೇತ್ರದ ಶಾಸಕ ಮರಗದಂ ಕುಮಾರವೇಲ್, ಧಾರಾಪುರಂ ಕ್ಷೇತ್ರದ ಸತ್ಯಭಾಮ, ಪುರಂದುರೈ ಕ್ಷೇತ್ರದ ಜಯಕುಮಾರ್ ರಾಜೀನಾಮೆ ನೀಡಿದ ಶಾಸಕರು.
ಈ ಮೂವರು ಶಾಸಕರು ಇತ್ತೀಚಿಗೆ ನಡೆದ ಸಿಎಂ ವಿಜಯ್ ನೇತೃತ್ವದ ಸರ್ಕಾಅರ ವಿಶ್ವಾಸ ಮತ ಯಾಚನೆ ವೇಳೆ ಪಕ್ಷದ ವಿಪ್ ಉಲ್ಲಂಘನೆ ಮಾಡಿ ವಿಜಯ್ ಅವರ ಟಿವಿಕೆ ಮೈತ್ರಿ ಕೂಟದ ಪರವಾಗಿ ಮತ ಚಲಾಯಿಸಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮೂವರು ನಾಯಕರು, ಸಚಿವ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ನಾಯಕ ಆಧವ್ ಅರ್ಜುನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಶೀಘ್ರದಲ್ಲಿ ಟಿವಿಕೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

