ಬೆಂಗಳೂರು: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮುಂದೂಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರೇಡ್ ಬಿ ಮುಖ್ಯ ಪರೀಕ್ಷೆ ಮತ್ತು ಕರ್ನಾಟಕ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಗಳು ಇದೇ ಜುಲೈ 26ರಂದು ಒಂದೇ ದಿನ ನಿಗದಿಯಾಗಿದ್ದವು. ಇದರಿಂದ ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತೊಂದರೆಗೊಳಗಾಗಿದ್ದರು. ಮಹತ್ವದ ಎರಡು ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದರಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗಳು ಯಾವುದಾದರೂ ಒಂದು ಪರೀಕ್ಷೆ ಕಳೆದುಕೊಳ್ಳುವ ಆತಂಕ ಉಂಟಾಗಿತ್ತು.
ಎರಡೂ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಪರೀಕ್ಷೆಯನ್ನು ಜುಲೈ 26ರ ಬದಲಿಗೆ ಆಗಸ್ಟ್ 9ಕ್ಕೆ ಮುಂದೂಡಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರೇಡ್ ಬಿ ಮುಖ್ಯ ಪರೀಕ್ಷೆ ಅಖಿಲ ಭಾರತ ಮಟ್ಟದ್ದಾಗಿರುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಬೇರೊಂದು ದಿನಾಂಕ ನಿಗದಿಪಡಿಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ಆ. 9ಕ್ಕೆ ಮುಂದೂಡಿದೆ.

