ಮೋದಿಜೀ ನೀವು ಎಲ್ಲರ ಮಾತನ್ನು ಕೇಳ್ತೀರ. ನನ್ನ ಮಾತನ್ನೂ ಕೇಳಿ ಎಂದು ತನ್ನ ಶಾಲೆಯ ಬಗ್ಗೆ ವಿಡಿಯೋ ಮಾಡಿದ್ದ ಜಮ್ಮು-ಕಾಶ್ಮೀರ ಶಾಲಾ ಬಾಲಕಿಯ ಮನವಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ʼನಮಗೊಂದು ಉತ್ತಮ ಶಾಲೆ ಕಟ್ಟಿಸಿಕೊಡಿ ಮೋದಿಜೀ ಎಂದು ಮನವಿ ಮಾಡಿದ್ದ ಶಾಲಾ ಬಾಲಕಿಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಾಲೆಯನ್ನ ಅಭಿವೃದ್ಧಿ ಮಾಡಲಾಗ್ತಿದೆ.
ಕಥುವಾ ಜಿಲ್ಲೆಯ ತನ್ನ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸುವಂತೆ 3 ನೇ ತರಗತಿಯ ವಿದ್ಯಾರ್ಥಿಯು ವೀಡಿಯೊ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಳು. ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಆಡಳಿತವು ಶಾಲೆಯನ್ನು ಅಭಿವೃದ್ಧಿ ಮಾಡುವ ಕೆಲಸವನ್ನು ಪ್ರಾರಂಭಿಸಿದೆ.
ಕಳೆದ ವಾರ ಪ್ರಧಾನಿಗೆ ಬಾಲಕಿ ಸೀರತ್ ನಾಜ್ ಮಾಡಿದ ಮನವಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ವಿಡಿಯೋ ವೈರಲ್ ಆದ ನಂತರ ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕ ರವಿಶಂಕರ್ ಶರ್ಮಾ ಅವರು ಲೋಹೈ-ಮಲ್ಹಾರ್ ಬ್ಲಾಕ್‌ನಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
‘ಶಾಲೆಯನ್ನು ಆಧುನಿಕ ರೀತಿಯಲ್ಲಿ ಮೇಲ್ದರ್ಜೆಗೇರಿಸಲು 91 ಲಕ್ಷ ರೂ. ಮೊತ್ತದ ಯೋಜನೆ ಮಂಜೂರಾಗಿದ್ದು, ಆಡಳಿತಾತ್ಮಕ ಮಂಜೂರಾತಿಗೆ ಸಂಬಂಧಿಸಿದ ಕೆಲ ಸಮಸ್ಯೆಯಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈಗ ಅದನ್ನು ಇತ್ಯರ್ಥಪಡಿಸಲಾಗಿದ್ದು, ಕಾಮಗಾರಿ ನಡೆಯುತ್ತಿದೆ’ ಎಂದು ಶಾಲೆಗೆ ಭೇಟಿ ನೀಡಿದ ಬಳಿಕ ರವಿಶಂಕರ್ ಶರ್ಮಾ ತಿಳಿಸಿದರು.
ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಲು ಆಕಾಂಕ್ಷಿಯಾಗಿರುವ ಬಾಲಕಿ ಸೀರತ್ ನಾಜ್, ತಾನು ವೀಡಿಯೊ ಮಾಡಿದ್ದೆ. ತನ್ನ ಸಂದೇಶಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದಳು.
https://twitter.com/AijjuR/status/1647004062649573377