ನಿವೃತ್ತಿ ದಿನ ಸಾರ್ಥಕ ಕಾರ್ಯ ಮಾಡಿದ ಎಸ್ಐ; ಸರ ಕಳೆದುಕೊಂಡಿದ್ದ ವೃದ್ಧೆಗೆ ಸರ್ಪ್ರೈಸ್ ಗಿಫ್ಟ್

ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರುಗಳ ಪೈಕಿ ಕೆಲವು ಇತ್ಯರ್ಥವಾಗದೇ ಹಾಗೇ ಉಳಿದುಹೋಗುತ್ತವೆ. ಕಳೆದುಹೋದ ಬೆಲೆಬಾಳುವ ವಸ್ತುಗಳನ್ನು ಹುಡುಕಿಕೊಡುವಂತೆ ನೀಡಿದ ಪ್ರಕರಣಗಳಲ್ಲಿ ಕೇರಳ ಪೊಲೀಸ್ ಇಲಾಖೆಯಲ್ಲಿ ನೂರಾರು ಪ್ರಕರಣಗಳು ಬಾಕಿಯಿದ್ದರೂ ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಲಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಒಂದು ಪ್ರಕರಣವು ಅಸಾಧಾರಣ, ಸಂತೋಷದ ಕ್ಲೈಮ್ಯಾಕ್ಸ್ ನೊಂದಿಗೆ ಕೊನೆಗೊಂಡಿದೆ.

ಎರಡು ವರ್ಷಗಳ ಹಿಂದೆ ಪಜಂಬಲಕ್ಕೋಡ್‌ನ ವೃದ್ಧೆಯೊಬ್ಬರು ತಾನು 1.5 ಸವರನ್ ಚಿನ್ನದ ಸರ ಕಳೆದುಕೊಂಡಿರುವುದಾಗಿ ಒಟ್ಟಪ್ಪಲಂ ಠಾಣೆಗೆ ದೂರು ನೀಡಿದ್ದರು. ವೃದ್ಧೆ ಫೆಬ್ರವರಿ 2019 ರಲ್ಲಿ ಒಟ್ಟಪಾಲಂ ತಾಲೂಕು ಆಸ್ಪತ್ರೆಗೆ ಎಕ್ಸ್-ರೇ ತೆಗೆಸಿಕೊಳ್ಳಲು ಬಂದಾಗ ಈ ಘಟನೆ ನಡೆದಿತ್ತು.

ಎಕ್ಸ್-ರೇ ಮಾಡಿಸಿಕೊಳ್ಳುನ ಸಮಯದಲ್ಲಿ ಚಿನ್ನದ ಸರವನ್ನ ತೆಗೆದಿಡುವಂತೆ ಸೂಚಿಸಿದ್ರಿಂದ ಅದನ್ನ ತೆಗೆದು ಪರ್ಸ್ ನಲ್ಲಿ ಹಾಕಿಟ್ಟಿದ್ದು ಮಾತ್ರ ವೃದ್ಧೆಗೆ ನೆನಪಿತ್ತು. ಆದರೆ ಎಲ್ಲಿ ಇಟ್ಟಿದ್ದಾಗಿ ವೃದ್ಧೆಗೆ ನೆನಪಿರಲಿಲ್ಲ. ಹೀಗಾಗಿ ಪೊಲೀಸರಿಗೆ ಪರ್ಸ್ ಎಲ್ಲಿತ್ತು, ಸರ ಕಳವಾಗಿದ್ದೇಗೆ ಎಂದು ಕಂಡು ಹಿಡಿಯಲು ಕಷ್ಟವಾಯಿತು.

ಪರ್ಸ್ ಹೇಗೆ ಕಳೆದುಹೋಯಿತು ಎಂಬ ಬಗ್ಗೆ ಮಹಿಳೆಗೆ ಯಾವುದೇ ಸುಳಿವು ಇಲ್ಲದ ಕಾರಣ ಪೊಲೀಸರ ತನಿಖೆಗೆ ಹಿನ್ನಡೆಯಾಯಿತು. ಆದರೆ ವೃದ್ಧೆ ಪದೇ ಪದೇ ಠಾಣೆಗೆ ಭೇಟಿ ನೀಡಿ ಕಳುವಾದ ಸರದ ಬಗ್ಗೆ ವಿಚಾರಿಸುತ್ತಿದ್ದರು. ಅದನ್ನು ತನ್ನ ಪತಿ ಮದುವೆಯ ಸಂದರ್ಭದಲ್ಲಿ ನೀಡಿದ್ದಾಗಿ ಆಕೆ ಹೇಳಿದ್ದಳು.

ಏತನ್ಮಧ್ಯೆ, ಎಡ್ತಾರಾ ಮೂಲದ ಎಸ್‌ಐ ಗೋವಿಂದಪ್ರಸಾದ್ ಅವರು ಸೆಪ್ಟೆಂಬರ್ 2020 ರಲ್ಲಿ ಒಟ್ಟಪಾಲಂ ಠಾಣೆಗೆ ಸೇರಿ ತನಿಖೆಯನ್ನು ವಹಿಸಿಕೊಂಡರು. ಆದರೆ ಪರ್ಸ್ ಸುಳಿವು ಸಿಗದ ಕಾರಣ ಸರ ಪತ್ತೆಯಾಗಲಿಲ್ಲ. ಇದರಿಂದ ನೊಂದ ಮಹಿಳೆ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದರು.

ಮಾರ್ಚ್ 31 ರಂದು, ಪ್ರಕರಣದ ಸ್ಥಿತಿಯನ್ನು ವಿಚಾರಿಸಲು ಮಹಿಳೆ ಮತ್ತೆ ಠಾಣೆಗೆ ಬಂದರು. ಅಂದು ಗೋವಿಂದಪ್ರಸಾದ್ ಅವರ ಸೇವೆಯ ಕೊನೆಯ ದಿನವಾಗಿತ್ತು. ಈ ವೇಳೆ ಮಹಿಳೆಯ ದುಃಖ ಮತ್ತು ಹತಾಶೆಯನ್ನು ನೋಡಿದ ಗೋವಿಂದಪ್ರಸಾದ್ ಅವರು ಅದನ್ನು ಸರ್ಕಲ್ ಇನ್ಸ್ ಪೆಕ್ಟರ್ ಸುಜಿತ್ ಅವರೊಂದಿಗೆ ಹಂಚಿಕೊಂಡು ವೃದ್ಧೆಗೆ ಹೊಸ ಸರವನ್ನ ನೀಡುವುದಾಗಿ ಸಲಹೆ ನೀಡಿದರು.

ಠಾಣೆಯ ಪ್ರತಿಯೊಬ್ಬ ಪೊಲೀಸರು ಹಣವನ್ನು ಒಟ್ಟುಗೂಡಿಸಲು ಮತ್ತು ಹೊಸ ಸರವನ್ನು ನೀಡಲು ಒಪ್ಪಿಕೊಂಡರು. ಗೋವಿಂದಪ್ರಸಾದ್ ಅವರ ನಿವೃತ್ತಿ ದಿನವಾದ್ದರಿಂದ ಅದೇ ದಿನ ನೆಕ್ಲೇಸ್ ನೀಡಬಹುದು ಎಂದು ಹೇಳಿದ ಸರ್ಕಲ್ ಇನ್ಸ್ ಪೆಕ್ಟರ್ ಅವರು ಮಹಿಳೆಗೆ ತಾವು ತಂದಿದ್ದ ಹೊಸ ಸರವನ್ನು ಉಡುಗೊರೆಯಾಗಿ ನೀಡುವಂತೆ ತಿಳಿಸಿದರು.

ನನ್ನ ಸೇವೆಯಲ್ಲಿ ಇದು ಅತ್ಯಂತ ಸಂತಸದ ಕ್ಷಣವಾಗಿದ್ದು, ಆ ವೃದ್ಧೆಯೂ ಅದೇ ಖುಷಿಯಲ್ಲಿದ್ದರು ಎಂದು ಗೋವಿಂದಪ್ರಸಾದ್ ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read