ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ವ್ಯಾಪ್ತಿಯ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಹತ್ವದ ಮಾಹಿತಿ ನೀಡಿದೆ. ನವೆಂಬರ್ 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಅನ್ವಯ, ವಾಸ್ತವ ವೇತನದ ಆಧಾರದ ಮೇಲೆ ಹೆಚ್ಚಿನ ಕೊಡುಗೆ (Higher Contribution) ಪಾವತಿಸಿ ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಿದ ಉದ್ಯೋಗಿಗಳಿಗೆ ಸಂಬಂಧಿಸಿದ ವಿವರಗಳನ್ನು ಸರ್ಕಾರ ಬಹಿರಂಗಪಡಿಸಿದೆ.
ಇದುವರೆಗೆ 1,49,806 ಪಿಂಚಣಿ ಪಾವತಿ ಆದೇಶಗಳನ್ನು (PPOs) ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಸಂಸತ್ತಿನಲ್ಲಿ ತಿಳಿಸಿದೆ. ಹೆಚ್ಚುವರಿ ಪಿಂಚಣಿಗಾಗಿ ಒಟ್ಟಾರೆ 15.24 ಲಕ್ಷಕ್ಕೂ ಹೆಚ್ಚು ಕ್ಲೇಮ್‌ಗಳು ಬಂದಿವೆ ಎಂದು EPFO ಅಂಕಿಅಂಶಗಳನ್ನು ಉಲ್ಲೇಖಿಸಿ ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಈವರೆಗೆ 1.49 ಲಕ್ಷ ಮಂದಿಗೆ ಹೆಚ್ಚುವರಿ ಪಿಂಚಣಿಗಾಗಿ ಪಿಂಚಣಿ ಪಾವತಿ ಆದೇಶಗಳನ್ನು (PPO) ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಿಂಚಣಿದಾರರು ಹಾಗೂ ಉದ್ಯೋಗಿಗಳು ತಮ್ಮ ಪಿಂಚಣಿ ಕ್ಲೇಮ್ ಸ್ಟೇಟಸ್ ಅನ್ನು ನಾಲ್ಕು ವಿಧಾನಗಳಲ್ಲಿ ಸುಲಭವಾಗಿ ಪರಿಶೀಲಿಸಬಹುದು.
1. EPFO ಅಧಿಕೃತ ಪೋರ್ಟಲ್ ಮೂಲಕ
EPFO ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ Services ವಿಭಾಗದಲ್ಲಿ For Employees ಆಯ್ಕೆಯನ್ನು ಆರಿಸಿ. ನಂತರ Know Your Claim Status ಮೇಲೆ ಕ್ಲಿಕ್ ಮಾಡಿ. ನಿಮ್ಮ UAN ಮತ್ತು ಕ್ಯಾಪ್ಚಾ ನಮೂದಿಸುವ ಮೂಲಕ ಕ್ಲೇಮ್ ಸ್ಟೇಟಸ್ ಪರಿಶೀಲಿಸಬಹುದು.
2. UMANG ಆ್ಯಪ್ ಮೂಲಕ
ಸ್ಮಾರ್ಟ್‌ಫೋನ್‌ನಲ್ಲಿ UMANG ಆ್ಯಪ್ ತೆರೆಯಿರಿ. ಅದರಲ್ಲಿ EPFO Services ಆಯ್ಕೆ ಮಾಡಿ, ಬಳಿಕ Employee Centric Services ವಿಭಾಗಕ್ಕೆ ತೆರಳಿ Track Claim ಮೇಲೆ ಕ್ಲಿಕ್ ಮಾಡಿ. UAN ಆಧಾರಿತ OTP ನಮೂದಿಸಿ ನಿಮ್ಮ ಕ್ಲೇಮ್ ಸ್ಟೇಟಸ್ ತಿಳಿದುಕೊಳ್ಳಬಹುದು.
3. SMS ಮೂಲಕ
ನಿಮ್ಮ UANಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 7738299899 ಸಂಖ್ಯೆಗೆ EPFOHO UAN TEL ಎಂದು SMS ಕಳುಹಿಸುವ ಮೂಲಕ ಪಿಂಚಣಿ ಕ್ಲೇಮ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು.
4. ಮಿಸ್ಡ್ ಕಾಲ್ ಮೂಲಕ
ನಿಮ್ಮ EPFO ಖಾತೆಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯಿಂದ 9966044425ಕ್ಕೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ PF ಬ್ಯಾಲೆನ್ಸ್ ಹಾಗೂ ಕೊನೆಯದಾಗಿ ಸಲ್ಲಿಸಿದ ಕ್ಲೇಮ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು.
85.84 ಲಕ್ಷ ಪಿಂಚಣಿದಾರರಿಗೆ ಲಾಭ
ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಮಾರ್ಚ್ 31, 2026ರ ವೇಳೆಗೆ ಒಟ್ಟು 85.84 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.ಹೆಚ್ಚುವರಿ ಪಿಂಚಣಿಗೆ ಅನುಮೋದನೆ ದೊರೆತ ಸದಸ್ಯರಿಗೆ ಪರಿಷ್ಕೃತ ಪಿಂಚಣಿ ಬಾಕಿಯ ಜೊತೆಗೆ ಪ್ರತಿ ತಿಂಗಳು ಹೆಚ್ಚಿದ ಪಿಂಚಣಿ ಮೊತ್ತವೂ ಖಾತೆಗೆ ಜಮೆಯಾಗಲಿದೆ. ಪಿಂಚಣಿದಾರರು ತಮ್ಮ Pension Payment Order (PPO) ಪಡೆದುಕೊಂಡು ಅದರಲ್ಲಿರುವ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಯಾವುದೇ ತಪ್ಪು ಕಂಡುಬಂದರೆ ಸಂಬಂಧಪಟ್ಟ EPFO ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸುವುದು ಸೂಕ್ತ.

