ಬೆಂಗಳೂರು : ಫ್ಯಾನ್ಸ್ ವಾರ್ ನಡುವೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್ ಗಳು ಬರಲು ಶುರು ಆಗಿದ್ದು, ಅವರು ಬೆಂಗಳೂರು ನಗರ ಕಮಿಷನರ್ ಗೆ ದೂರು ಸಲ್ಲಿಸಿದ್ದಾರೆ.
ಹೌದು, ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ವಾರ್ ಶುರು ಆಗಿದ್ದು, ಅಭಿಮಾನಿಗಳ ವರ್ತನೆ ಹದ್ದು ಮೀರಿದೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್, ಕಮೆಂಟ್ ಗಳು ಬರಲು ಶುರು ಆಗಿದ್ದು, ವಿಜಯಲಕ್ಷ್ಮಿ ಬೆಂಗಳೂರು ನಗರ ಕಮಿಷನರ್ ಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮಾತನಾಡಿದ ಸುದೀಪ್, ಯುದ್ಧಕ್ಕೆ ಸಿದ್ಧವಾಗಿದ್ದೇವೆ ಅಂತ ಗುಡುಗಿದ್ದಾರೆ. ಐದು ತಿಂಗಳ ಹಿಂದೆ ‘ಮಾರ್ಕ್’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಅಂತೆಯೇ ನಾವು ಡಿ. 25ರಂದು ಬರುತ್ತಿದ್ದೇವೆ. ಈ ನಡುವೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ. ನಾವೂ ರೆಡಿಯಾಗಿದ್ದೇವೆ. ಡಿಸೆಂಬರ್ 25ಕ್ಕೆ ಜೋರಾಗಿ ಬಾಗಿಲು ತಟ್ಟುತ್ತಿದ್ದೇವೆ. ಆದರೆ ಹೊರಗಡೆ ಯುದ್ಧಕ್ಕೆ ಒಂದು ಪಡೆ ರೆಡಿಯಾಗುತ್ತಿದ್ದಾರೆ. ನಾವೂ ಸಿದ್ಧರಿದ್ದೇವೆ ಎಂದು ಸುದೀಪ್ ಹೇಳಿದ್ದರು. ನಂತರ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿತ್ತು.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸುದೀಪ್ ಗೆ ಪರೋಕ್ಷ ಟಾಂಗ್ ನೀಡಿದ್ದರು. ‘ಡೆವಿಲ್’ ಚಿತ್ರ ಪ್ರದರ್ಶನ ಹಿನ್ನೆಲೆಯಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಮಾತನಾಡಿ, ದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಅವರ ಅಭಿಮಾನಿಗಳ ಬಗ್ಗೆ ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಟಿವಿ ಸಂದರ್ಶನದಲ್ಲಿ, ಸ್ಟೇಜ್ ಮೇಲೆ ಮಾತಾಡ್ತಾರೆ. ಆದರೆ, ದರ್ಶನ್ ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ. ಬೆಂಗಳೂರಿನಲ್ಲಿ ಇದ್ದಾರಾ ಎಂದು ಗೊತ್ತೇ ಆಗದಂತೆ ಇರುತ್ತಾರೆ. ಟೀಕಿಸುವವರ ಬಗ್ಗೆ ದರ್ಶನ್ ತಲೆಕೆಡಿಸಿಕೊಳ್ಳುವುದಿಲ್ಲ. ಬೇಜಾರು ಮಾಡಿಕೊಳ್ಳುವುದಿಲ್ಲ. ದರ್ಶನ್ ಅಭಿಮಾನಿಗಳಾದ ನೀವು ಕೂಡ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ವರ್ತನೆ ಹದ್ದು ಮೀರುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕಾದಾಟದಲ್ಲಿ ತೊಡಗಿದ್ದಾರೆ.

