ಧಾರವಾಡ: ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇವರಾಜನ್ ತಂಗದುರೈ ಅವರನ್ನು ವಿಶ್ವವಿದ್ಯಾಲಯ ಆಡಳಿತ ಅಮಾನತುಗೊಳಿಸಿದೆ. ಈ ಪ್ರಕರಣವು ವಿಶ್ವವಿದ್ಯಾಲಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿ ಸಂಘಟನೆಗಳು ಕಠಿಣ ಕ್ರಮಕ್ಕೆ ಆಗ್ರಹಿಸಿವೆ.
ಪ್ರಾಧ್ಯಾಪಕರು ತಮ್ಮ ಮಾರ್ಗದರ್ಶನದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಬಳಿಕ ಆ ವಿದ್ಯಾರ್ಥಿನಿ ಸಂಶೋಧನೆಯನ್ನು ಮಧ್ಯದಲ್ಲೇ ನಿಲ್ಲಿಸಿ ವಿಶ್ವವಿದ್ಯಾಲಯ ತೊರೆದಿದ್ದಾಳೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಮತ್ತೊಬ್ಬ ಸಂಶೋಧನಾ ವಿದ್ಯಾರ್ಥಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ತನ್ನ ಸಂಶೋಧನಾ ಕಾರ್ಯ ಪೂರ್ಣಗೊಳಿಸಲು ಸಹಕರಿಸುವ ಬದಲಾಗಿ, ಹಿಂದಿನ ವಿದ್ಯಾರ್ಥಿನಿಯನ್ನು ಮತ್ತೆ ಸಂಪರ್ಕಿಸಲು ಪ್ರಾಧ್ಯಾಪಕರು ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಕೆಲವು ಆಡಿಯೋ ದಾಖಲೆಗಳು ಹಾಗೂ ಇತರೆ ಸಾಕ್ಷ್ಯಗಳನ್ನೂ ವಿದ್ಯಾರ್ಥಿ ಸಂಘಟನೆಗಳು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಆರೋಪಗಳು ಬಹಿರಂಗವಾದ ನಂತರ ವಿದ್ಯಾರ್ಥಿ ಸಂಘಟನೆಗಳು ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಶ್ವವಿದ್ಯಾಲಯ ಆಡಳಿತವು ಪ್ರಾಧ್ಯಾಪಕ ದೇವರಾಜನ್ ತಂಗದುರೈ ಅವರನ್ನು ಅಮಾನತುಗೊಳಿಸಿ ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.
ಘಟನೆಯ ವಿವರ: ವಿಶ್ವವಿದ್ಯಾಲಯದ ಪಿಎಚ್ಡಿ (Ph.D) ಸಂಶೋಧನಾ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ, ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪ ಪ್ರೊಫೆಸರ್ ಮೇಲೆ ವ್ಯಕ್ತವಾಗಿದೆ. ವಿಜಯಪುರ ಮೂಲದ ಆ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಬಳಿಕ, ಆಕೆಗೆ ಮೂರು ಬಾರಿ ಬಲವಂತವಾಗಿ ಅಥವಾ ಸಮ್ಮತಿಯಿಲ್ಲದೆ ಗರ್ಭಪಾತ ಮಾಡಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ವಿಷಯ ಕುಟುಂಬದವರಿಗೆ ತಿಳಿದ ಬಳಿಕ ಸಂತ್ರಸ್ತ ವಿದ್ಯಾರ್ಥಿನಿ ತನ್ನ ಸಂಶೋಧನೆಯನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಮರಳಿದ್ದಾಳೆ.
ಇನ್ನೊಬ್ಬ ವಿದ್ಯಾರ್ಥಿಯ ಮೇಲೆ ಒತ್ತಡ: ಈ ಪ್ರಕರಣದ ನಂತರ, ಅದೇ ಪ್ರೊಫೆಸರ್ ಬಳಿ ಮಾರ್ಗದರ್ಶನ ಪಡೆಯುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ವೇದವ್ಯಾಸ್ ಚೌಹಾಣ್ ಅವರ ಮೇಲೆ ಪ್ರೊಫೆಸರ್ ಒತ್ತಡ ಹೇರಿದ್ದಾರೆ ಎಂಬ ಆರೋಪವಿದೆ. “ಆ ವಿದ್ಯಾರ್ಥಿನಿಯನ್ನು ಮರಳಿ ಕರೆತಂದರೆ ಮಾತ್ರ ನಿನಗೆ ಪಿಎಚ್ಡಿ ಪೂರ್ಣಗೊಳಿಸಲು ಸಹಕರಿಸುತ್ತೇನೆ, ಇಲ್ಲದಿದ್ದರೆ ಇಲ್ಲ” ಎಂದು ಪ್ರೊಫೆಸರ್ ಬೆದರಿಕೆ ಹಾಕಿದ್ದಾರೆ ಎಂದು ವೇದವ್ಯಾಸ್ ದೂರಿನಲ್ಲಿ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣದ ಸಾಕ್ಷ್ಯ: ಪ್ರೊಫೆಸರ್ ಸ್ವತಃ ವಿದ್ಯಾರ್ಥಿನಿಯೊಂದಿಗಿನ ಆಪ್ತ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು ಎಂಬ ಮಾತುಗಳೂ ಕೇಳಿಬರುತ್ತಿವೆ. ಇದು ಘಟನೆಯ ಗಂಭೀರತೆಯನ್ನು ಹೆಚ್ಚಿಸಿದೆ.
ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ: ಈ ಕೃತ್ಯದ ವಿರುದ್ಧ ಸಂತ್ರಸ್ತ ವಿದ್ಯಾರ್ಥಿ ವೇದವ್ಯಾಸ್ ಅವರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಮತ್ತು ವಿದ್ಯಾರ್ಥಿ ಸಂಘಟನೆಗಳಿಗೆ ದೂರು ನೀಡಿದ್ದಾರೆ. ಆರೋಪಿ ಪ್ರೊಫೆಸರ್ ದೇವರಾಜ್ ತಂಗುದೊರೈ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿದ್ದವು..

