ಬೆಂಗಳೂರು: ಭೋವಿ ನಿಗಮದ ಫಲಾನುಭವಿಗಳಿಂದ ಕಮಿಷನ್ ವಸೂಲಿ ಆರೋಪಕ್ಕೆ ಗುರಿಯಾಗಿರುವ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದಿಂದ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಭೂಒಡೆತನ ಯೋಜನೆ ಜಾರಿಗೊಳಿಸಲಾಗಿದ್ದು, ಯೋಜನೆಯಡಿ 60 ಎಕರೆ ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಈ ಫಲಾನುಭವಿಗಳಿಂದ ಪ್ರತಿ ಘಟಕ ವೆಚ್ಛಕ್ಕೆ ಶೇಕಡ 40 ರಿಂದ 60ರಷ್ಟು ಕಮಿಷನ್ ನಿಗದಿ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತಾ ವಿಡಿಯೋ ವೈರಲ್ ಆಗಿದ್ದು, ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಸ್. ರವಿಕುಮಾರ್ ಅವರಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.
ತನಿಖೆಯಲ್ಲಿ ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಎಸ್. ರವಿಕುಮಾರ್ ಸಿಎಂಗೆ ತಿಳಿಸಿದ್ದು, ಇದನ್ನು ಒಪ್ಪದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.