ನವದೆಹಲಿ: 2026ರ ಟಿ20 ವಿಶ್ವಕಪ್ ಹೀರೊ ಅಭಿಷೇಕ್ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ‘ಇಂಡಿಯಾ ಟುಡೇ ಕಾಂಕ್ಲೇವ್ 2026’ ಕಾರ್ಯಕ್ರಮದಲ್ಲಿ ಅಭಿಷೇಕ್ ಶರ್ಮಾ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ನಡೆದ ಒಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಆಟೋಗ್ರಾಫ್ ನೀಡಲು ನಿರಾಕರಿಸಿದ್ದೇಕೆ? ವೇದಿಕೆಯ ಮೇಲೆ ಕಾರ್ಯಕ್ರಮದ ನಿರೂಪಕರು ಅಭಿಷೇಕ್ ಶರ್ಮಾ ಅವರಿಗೆ ಅಕ್ಷಯ್ ಕುಮಾರ್‌ಗೆ ಒಂದು ‘ಆಟೋಗ್ರಾಫ್’ ನೀಡುವಂತೆ ವಿನಂತಿಸಿದರು. ಆದರೆ ಅಭಿಷೇಕ್ ತಕ್ಷಣವೇ ಅದಕ್ಕೆ ನಿರಾಕರಿಸಿದರು. ಈ ಉತ್ತರ ಕೇಳಿ ಅಲ್ಲಿ ನೆರೆದಿದ್ದವರು ಕ್ಷಣಕಾಲ ಆಶ್ಚರ್ಯಚಕಿತರಾದರು. ಆದರೆ, ಅದರ ಬೆನ್ನಲ್ಲೇ ಅಭಿಷೇಕ್ ಮಾಡಿದ ಕೆಲಸ ಎಲ್ಲರ ಮನಗೆದ್ದಿದೆ.
ವಿಶ್ವಕಪ್ ಆಡಿದ ಬ್ಯಾಟ್ ಗಿಫ್ಟ್: ಆಟೋಗ್ರಾಫ್ ನೀಡುವ ಬದಲು, ಅಭಿಷೇಕ್ ಶರ್ಮಾ ಅವರು ತಾವು 2026ರ ಟಿ20 ವಿಶ್ವಕಪ್‌ನಲ್ಲಿ ಬಳಸಿದ್ದ ಲಕ್ಕಿ ಬ್ಯಾಟ್ ಅನ್ನು ಅಕ್ಷಯ್ ಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಿದರು. “ಅಕ್ಷಯ್ ಸರ್ ಅವರೇ ಈ ಬ್ಯಾಟ್ ಅನ್ನು ಕೇಳಿದ್ದರು, ಆಟೋಗ್ರಾಫ್‌ಗಿಂತ ಈ ಬ್ಯಾಟ್ ಅವರಿಗೆ ನೀಡುವುದು ನನಗೆ ಹೆಮ್ಮೆಯ ವಿಷಯ” ಎಂದು ಅಭಿಷೇಕ್ ತಿಳಿಸಿದರು. ಯಾವುದೇ ಕ್ರಿಕೆಟ್ ಅಭಿಮಾನಿಗೆ ವಿಶ್ವಕಪ್ ವಿಜೇತ ಬ್ಯಾಟ್ ಅತ್ಯಂತ ಅಮೂಲ್ಯವಾದುದು, ಅಂತಹ ಬ್ಯಾಟ್ ಅನ್ನು ಅಕ್ಷಯ್ ಕುಮಾರ್ ಅವರಿಗೆ ನೀಡಿ ಅಭಿಷೇಕ್ ದೊಡ್ಡ ಗುಣ ಮೆರೆದಿದ್ದಾರೆ.
ವೇದಿಕೆಯಲ್ಲಿ ಅಕ್ಷಯ್-ಅಭಿಷೇಕ್ ಡಾನ್ಸ್: ಬ್ಯಾಟ್ ಪಡೆದ ಸಂಭ್ರಮದಲ್ಲಿದ್ದ ಅಕ್ಷಯ್ ಕುಮಾರ್, ಅಭಿಷೇಕ್ ಶರ್ಮಾ ಅವರಿಗೆ ತಮ್ಮದೇ ಸ್ಟೈಲ್‌ನ ಕೆಲವು ಡಾನ್ಸ್ ಸ್ಟೆಪ್‌ಗಳನ್ನು ಹೇಳಿಕೊಟ್ಟರು. ಮೈದಾನದಲ್ಲಿ ಬೌಲರ್‌ಗಳನ್ನು ದಂಡಿಸುವ ಅಭಿಷೇಕ್, ವೇದಿಕೆಯ ಮೇಲೆ ಅಕ್ಷಯ್ ಕುಮಾರ್ ಜೊತೆ ಹೆಜ್ಜೆ ಹಾಕಿದ್ದು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು.
ವಿಶ್ವಕಪ್ ಫೈನಲ್‌ನಲ್ಲಿ ಮಿಂಚಿದ್ದ ಅಭಿಷೇಕ್: ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಅರ್ಧಶತಕ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಜು ಸ್ಯಾಮ್ಸನ್ ಜೊತೆಗೂಡಿ ಮೊದಲ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವಾಡಿ ಭಾರತಕ್ಕೆ 3ನೇ ಟಿ20 ವಿಶ್ವಕಪ್ ತಂದುಕೊಟ್ಟಿದ್ದರು.
ಅಭಿಷೇಕ್ ಶರ್ಮಾ ಮುಂದಿನ ಐಪಿಎಲ್ 2026ರಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಪರ ಕಣಕ್ಕಿಳಿಯಲಿದ್ದಾರೆ. ಮಾರ್ಚ್ 28 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡವು ಹಾಲಿ ಚಾಂಪಿಯನ್ ಆರ್ ಸಿಬಿ (RCB) ತಂಡವನ್ನು ಎದುರಿಸಲಿದೆ.

