ಸಾಮಾನ್ಯವಾಗಿ ಕಾಲೇಜಿನ ಮೊದಲ ದಿನ ಎಂದರೆ ಪೋಷಕರು ತಮ್ಮ ಮಕ್ಕಳ ಕೈಹಿಡಿದು, ಹೊಸ ಬದುಕಿನ ಹಂತಕ್ಕೆ ಧೈರ್ಯ ತುಂಬಿ ಕಾಲೇಜಿಗೆ ಅಥವಾ ಹಾಸ್ಟೆಲ್‌ಗೆ ಬಿಟ್ಟುಬರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಮುಂಬೈನಲ್ಲಿ ಇದರ ಸಂಪೂರ್ಣ ಉಲ್ಟಾ, ಅತ್ಯಂತ ಮುದ್ದಾದ ಹಾಗೂ ಕಣ್ಣು ತೇವಗೊಳಿಸುವ ಘಟನೆಯೊಂದು ನಡೆದಿದೆ. ಮಗಳೊಬ್ಬಳು ತನ್ನ ಅಮ್ಮನನ್ನು ಮೂರು ತಿಂಗಳ ವೃತ್ತಿಪರ ಕೋರ್ಸ್‌ಗೆ ಸೇರಿಸಿ, ಕಾಲೇಜಿನ ಮೊದಲ ದಿನ ಆಕೆಯನ್ನು ಕರೆದೊಯ್ದು ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಗೆದ್ದಿದೆ.
ತನ್ವಿ ಮಲ್ಹಾರಾ ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾಯಿಯ ಕಾಲೇಜಿನ ಮೊದಲ ದಿನದ ಅನುಭವಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
‘ಕಾಲೇಜಿನ ಫಸ್ಟ್ ಡೇ ನನ್ನದಲ್ಲ, ಅಮ್ಮನದ್ದು !
ವಿಡಿಯೋದ ಆರಂಭದಲ್ಲೇ ತನ್ವಿ, “ಇವತ್ತು ಕಾಲೇಜಿನ ಮೊದಲ ದಿನ… ನನಗಲ್ಲ, ನನ್ನ ಅಮ್ಮನಿಗೆ!” ಎಂದು ಹೆಮ್ಮೆಯಿಂದ ಹೇಳುತ್ತಾರೆ. ನಂತರ ಅಮ್ಮನಿಗೆ “ಯಾವ ಕೋರ್ಸ್ ಮಾಡ್ತಿದ್ದೀರಾ?” ಎಂದು ಕೇಳಿದಾಗ, ಆಕೆಯ ತಾಯಿ ನಗುಮುಖದಿಂದ “ಪ್ಯಾಕೇಜಿಂಗ್ ಕೋರ್ಸ್” ಎಂದು ಉತ್ತರಿಸುತ್ತಾರೆ.
ತನ್ವಿ ಮುಂದುವರಿದು, “ನಮ್ಮ ಅಮ್ಮ ಮುಂಬೈನಲ್ಲಿ ಮೂರು ತಿಂಗಳ ಪ್ಯಾಕೇಜಿಂಗ್ ಕೋರ್ಸ್ ಮಾಡುತ್ತಿದ್ದಾರೆ. ನಾವೀಗ ಆಕೆಯ ಹಾಸ್ಟೆಲ್ ಕೊಠಡಿ ನೋಡಲು ಹೋಗುತ್ತಿದ್ದೇವೆ” ಎಂದು ಕ್ಯಾಂಪಸ್ ತೋರಿಸುತ್ತಾರೆ. ಮುಂಬೈನ ಪ್ರತಿಷ್ಠಿತ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್’ (IIP) ಸಂಸ್ಥೆಗೆ ಡಾ. ನಳಿನಿ ಅವರು ಈ ಕೋರ್ಸ್‌ಗಾಗಿ ಪ್ರವೇಶ ಪಡೆದಿದ್ದಾರೆ.
ನಗು-ಕಣ್ಣೀರಿನ ನಡುವೆ ಕಾಲೇಜು ಎಂಟ್ರಿ
ಈ ಸುಂದರ ಕ್ಷಣದ ಹಿಂದೆ ತಾಯಿಯ ತಳಮಳ ಮತ್ತು ಭಾವುಕತೆಯೂ ಇತ್ತು. “ಅಮ್ಮ ಈಗ ನಗುತ್ತಿದ್ದಾಳೆ ನಿಜ, ಆದರೆ ಕಳೆದ ಎರಡು ದಿನಗಳಿಂದ ಈಕೆ ಅಷ್ಟೇ ಅತ್ತಿದ್ದಾಳೆ. ಕೋರ್ಸ್ ಮಾಡಲು ಆಕೆಗೆ ಇಷ್ಟವಿಲ್ಲ, ಆದರೂ ಕಲಿಯಬೇಕೆಂಬ ಆಸೆಯೂ ಇದೆ,” ಎಂದು ತನ್ವಿ ವಿವರಿಸುತ್ತಾರೆ.
ತನ್ನ ಈ ವಯಸ್ಸಿನಲ್ಲಿ ಮತ್ತೆ ಸ್ಟೂಡೆಂಟ್ ಲೈಫ್‌ಗೆ ಮರಳಿದ್ದರ ಬಗ್ಗೆ ತಾಯಿ ತಮಾಷೆಯಾಗಿ, “ನಾನು ರಾಮಧ್ಯಾನ ಮಾಡಿಕೊಂಡು ಮನೆಯಲ್ಲಿ ಇರಬೇಕಾದ ವಯಸ್ಸಿನಲ್ಲಿ, ನನ್ನನ್ನು ಓದಿಸುವುದಕ್ಕೆ ಇಲ್ಲಿಗೆ ಕಳಿಸಿದ್ದಾರೆ!” ಎಂದು ನಗುತ್ತಾ ಹೇಳಿರುವ ಮಾತುಗಳು ಎಲ್ಲರ ಮುಖದಲ್ಲೂ ಮುಗುಳುನಗೆ ಮೂಡಿಸುತ್ತವೆ.
ನೆಟ್ಟಿಗರ ಮೆಚ್ಚುಗೆಯ ಮಹಾಪೂರ:
“ಡಾ. ನಳಿನಿ ಸದಾ ಕಲಿಯುತ್ತಲೇ ಇರುತ್ತಾರೆ” ಎಂಬ ಕ್ಯಾಪ್ಶನ್‌ನೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.
ವಯಸ್ಸಿನ ಬೇಧವಿಲ್ಲದೆ ಹೊಸದನ್ನು ಕಲಿಯಲು ಮುಂದಾದ ತಾಯಿಯ ಸಾಹಸ ಹಾಗೂ ಅಮ್ಮನ ಕನಸಿಗೆ ಹೆಗಲುಕೊಟ್ಟು ಜೊತೆಯಾಗಿ ನಿಂತ ಮಗಳ ಪ್ರೀತಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. “ಪ್ರತಿಯೊಬ್ಬ ತಾಯಿಗೂ ಇಂತಹ ಸಪೋರ್ಟಿವ್ ಮಗಳು ಸಿಗಬೇಕು”, “ಕಲಿಕೆಗೆ ಎಂದಿಗೂ ವಯಸ್ಸಿನ ಅಡೆತಡೆಯಿಲ್ಲ ಎಂಬುದಕ್ಕೆ ಈ ತಾಯಿ ಸ್ಫೂರ್ತಿ” ಎಂದು ಬಳಕೆದಾರರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ.

