ಅಮೆರಿಕದ ಐಯೋವಾದ 20 ವರ್ಷದ ಯುವತಿಯೊಬ್ಬಳು ತನ್ನ ವಿಚಿತ್ರವಾದ ಕ್ಯಾನ್ಸರ್ ಲಕ್ಷಣಗಳನ್ನು ವೈದ್ಯರು ಆರಂಭದಲ್ಲಿ ನಿರ್ಲಕ್ಷಿಸಿದ್ದರೂ, ತಾನು ಪಟ್ಟು ಹಿಡಿದು ಸಿಟಿ ಸ್ಕ್ಯಾನ್ ಮಾಡಿಸಿಕೊಂಡ ಪರಿಣಾಮವಾಗಿ ಮಾರಣಾಂತಿಕ ರೋಗದಿಂದ ಪಾರಾಗಿದ್ದಾಳೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾದ ಕಿಂಜಿ ಡ್ರೈಡೆನ್ ಎಂಬಾಕೆ ತನಗೆ ಕಾಣಿಸಿಕೊಂಡ ಕಣ್ಣಿನ ಊತ, ತೂಕ ಇಳಿಕೆ ಮತ್ತು ನಿರಂತರ ಆಯಾಸದಂತಹ ಲಕ್ಷಣಗಳನ್ನು ವೈದ್ಯರು ಓದಿನ ಒತ್ತಡ ಎಂದು ನಿರ್ಲಕ್ಷಿಸಿದ್ದರು ಎಂದು ಹೇಳಿಕೊಂಡಿದ್ದಾಳೆ.
ತನ್ನ ಟಿಕ್‌ಟಾಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಕಿಂಜಿ, “ನಿಮಗೂ ಇಂತಹ ಅನುಭವವಾಗಿದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ಮತ್ತು ನಿಮ್ಮ ಆರೋಗ್ಯಕ್ಕಾಗಿ ವಾದಿಸಿ. ನಾನು ವೈದ್ಯರನ್ನು ಪರೀಕ್ಷಿಸಲು ಒತ್ತಾಯಿಸದಿದ್ದರೆ ಸಾಯುತ್ತಿದ್ದೆ,” ಎಂದು ಹೇಳಿದ್ದಾಳೆ. ಕೇವಲ 18 ವರ್ಷ ವಯಸ್ಸಿನಲ್ಲಿದ್ದಾಗಲೇ ಹಾಡ್ಗ್ಕಿನ್ ಲಿಂಫೋಮಾ ಎಂಬ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿಂಜಿಗೆ ಇದು ಬಹಳ ಕಷ್ಟಕರವಾದ ಮತ್ತು ನೋವಿನ ಪಯಣವಾಗಿತ್ತು. ಹಾಡ್ಗ್ಕಿನ್ ಲಿಂಫೋಮಾವು ದುಗ್ಧರಸ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದ್ದು, ಇದು ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕಿಂಜಿಗೆ ಮೊದಲು ಕಾಣಿಸಿಕೊಂಡ ಲಕ್ಷಣವೆಂದರೆ ಆಕೆಯ ಬಲ ಕಣ್ಣು ಸರಿಯಾಗಿ ತೆರೆಯುತ್ತಿರಲಿಲ್ಲ. “ನನ್ನ ಬಲ ಕಣ್ಣು ಮುರಿದ ಗೊಂಬೆಯ ಕಣ್ಣಿನಂತಿತ್ತು,” ಎಂದು ಆಕೆ ಹೇಳಿದ್ದಾಳೆ. ಮಿಯಾಮಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾದ ಕಿಂಜಿ ತಕ್ಷಣ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಧಾವಿಸಿದಳು. ಅಲ್ಲಿ ಆಕೆಯ ಬಲ ಕಣ್ಣಿನ ಪಾಪೆಯ ಗಾತ್ರ ಹಿಗ್ಗಿತು. ಆದರೆ ವೈದ್ಯರು ಆಕೆಯ ಎಲ್ಲಾ ಆತಂಕಗಳನ್ನು ಕಡೆಗಣಿಸಿದರು. ಓದಿನ ಒತ್ತಡದಿಂದ ಈ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವೈದ್ಯರು ತಿಳಿಸಿದರು. ಆದರೆ ಕಿಂಜಿಗೆ ಮುಖದಲ್ಲಿ ತೂಕ ಕಡಿಮೆಯಾಗುವುದು ಮತ್ತು ನಿರಂತರ ಸುಸ್ತು ಮುಂತಾದ ಇತರ ಲಕ್ಷಣಗಳು ಸಹ ಇದ್ದವು.
ಕೊನೆಗೂ ಕಿಂಜಿ ಪಟ್ಟು ಹಿಡಿದು ಸಿಟಿ ಸ್ಕ್ಯಾನ್ ಮಾಡಿಸಿಕೊಂಡಳು. ಸ್ಕ್ಯಾನ್ ಫಲಿತಾಂಶದಲ್ಲಿ ಆಕೆಯ ಎದೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಯಿತು. “ನಾನು ಹೇಗೆ ಬದುಕಿದ್ದೇನೆ ಮತ್ತು ಇದನ್ನು ಹೇಗೆ ನಾನು ಇದುವರೆಗೆ ಗಮನಿಸಲಿಲ್ಲ ಎಂದು ವೈದ್ಯರೇ ಆಶ್ಚರ್ಯಪಟ್ಟರು,” ಎಂದು ಕಿಂಜಿ ಹೇಳಿದ್ದಾಳೆ. “ನಾನು ತಕ್ಷಣ ಕೀಮೋಥೆರಪಿಯನ್ನು ಪ್ರಾರಂಭಿಸಿದೆ. ಒಂದು ವೇಳೆ ನಾನು ಚಿಕಿತ್ಸೆ ಪಡೆಯದಿದ್ದರೆ ಕೆಲವೇ ತಿಂಗಳುಗಳಲ್ಲಿ ಸಾಯುತ್ತಿದ್ದೆ ಎಂದು ವೈದ್ಯರು ಹೇಳಿದರು,” ಎಂದು ಆಕೆ ತಿಳಿಸಿದ್ದಾಳೆ.
ಹಾಡ್ಗ್ಕಿನ್ ಲಿಂಫೋಮಾ ಎಂದರೇನು?
ಹಾಡ್ಗ್ಕಿನ್ ಲಿಂಫೋಮಾವು ರಕ್ತ ಕ್ಯಾನ್ಸರ್‌ಗಳ ಗುಂಪಿಗೆ ಸೇರಿದ್ದು, ಇದು ದುಗ್ಧರಸ ವ್ಯವಸ್ಥೆಯಲ್ಲಿ ಬೆಳೆಯುತ್ತದೆ. ಲಿಂಫೋಮಾದ ಎರಡು ಮುಖ್ಯ ವಿಧಗಳಲ್ಲಿ ಇದೂ ಒಂದು (ಇನ್ನೊಂದು ವಿಧವೆಂದರೆ ನಾನ್-ಹಾಡ್ಗ್ಕಿನ್ ಲಿಂಫೋಮಾ). ಈ ಕ್ಯಾನ್ಸರ್‌ಗಳು ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿರುವ ಬಿಳಿ ರಕ್ತ ಕಣಗಳಾದ ಲಿಂಫೋಸೈಟ್‌ಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ವೈದ್ಯರು ಹೇಳುತ್ತಾರೆ.
ಬಿ ಲಿಂಫೋಸೈಟ್‌ಗಳೊಳಗಿನ ಜೀನ್‌ಗಳು ರೂಪಾಂತರಗೊಂಡಾಗ ಅಥವಾ ಜೀವನದಲ್ಲಿ ಒಂದು ಹಂತದಲ್ಲಿ ಬದಲಾಗಲು ಪ್ರಾರಂಭಿಸಿದಾಗ ಹಾಡ್ಗ್ಕಿನ್ ಲಿಂಫೋಮಾ ಉಂಟಾಗುತ್ತದೆ. ಹಾಡ್ಗ್ಕಿನ್ ಲಿಂಫೋಮಾ ಸಾಮಾನ್ಯವಾಗಿ ಕುತ್ತಿಗೆಯ ದುಗ್ಧರಸ ಗ್ರಂಥಿಗಳಲ್ಲಿ ಪ್ರಾರಂಭವಾಗುತ್ತದೆ.
ಹಾಡ್ಗ್ಕಿನ್ ಲಿಂಫೋಮಾದ ಲಕ್ಷಣಗಳು
ಹಾಡ್ಗ್ಕಿನ್ ಲಿಂಫೋಮಾದ ಮೊದಲ ಸಾಮಾನ್ಯ ಲಕ್ಷಣವೆಂದರೆ ಕುತ್ತಿಗೆ, ಕಂಕುಳು ಅಥವಾ ತೊಂಕೆಯ ಭಾಗದಲ್ಲಿ ನೋವಿಲ್ಲದ ಊತ. ಇತರ ಕೆಲವು ಲಕ್ಷಣಗಳು ಹೀಗಿವೆ:
- ನಿರಂತರ ಆಯಾಸ
- ಸಾಮಾನ್ಯಕ್ಕಿಂತ ಹೆಚ್ಚು ದಣಿದಿರುವುದು (ಕನಿಷ್ಠ ಹಲವಾರು ದಿನಗಳವರೆಗೆ).
- ಕಾರಣವಿಲ್ಲದ ಜ್ವರ
- ಮನೆಯಲ್ಲಿ ಚಿಕಿತ್ಸೆ ನೀಡಿದರೂ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇರುವ ಅಥವಾ ಎರಡು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿಯುವ ಹೆಚ್ಚಿನ ಜ್ವರ.
- ರಾತ್ರಿ ಬೆವರುವಿಕೆ
- ಬೆವರು ಅತಿಯಾಗಿ ಬಂದು ಬಟ್ಟೆ ಮತ್ತು ಹಾಸಿಗೆ ಸಂಪೂರ್ಣವಾಗಿ ನೆನೆದು ಹೋದರೆ ಗಂಭೀರವಾಗಿ ಪರಿಗಣಿಸಿ.
- ತೂಕ ಇಳಿಕೆ
- ಯಾವುದೇ ಪ್ರಯತ್ನವಿಲ್ಲದೆ ಆರು ತಿಂಗಳಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ದೇಹದ ತೂಕ ಕಡಿಮೆಯಾಗುವುದು.
- ಚರ್ಮದ ತುರಿಕೆ
- ಕೆಲವು ಹಾಡ್ಗ್ಕಿನ್ ಲಿಂಫೋಮಾ ರೋಗಿಗಳಿಗೆ ಮದ್ಯಪಾನ ಮಾಡಿದ ನಂತರ ಅಥವಾ ಸ್ನಾನ ಮಾಡಿದ ನಂತರ ತೀವ್ರ ತುರಿಕೆ ಉಂಟಾಗುತ್ತದೆ.
- ಹೊಟ್ಟೆ ಊತ
- ಎಲ್ಲಾ ಹೊಟ್ಟೆ ನೋವು ಗಂಭೀರ ಕಾಯಿಲೆಯ ಸಂಕೇತವಲ್ಲ, ಆದರೆ ಅದು ನಿಲ್ಲದೆ ದೀರ್ಘಕಾಲದವರೆಗೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ.
- ಎದೆ ನೋವು ಮತ್ತು ಉಸಿರಾಟದ ತೊಂದರೆ
- ಇದು ಶ್ವಾಸಕೋಶದ ಅಂಗಾಂಶಗಳು ಅಥವಾ ಎದೆಯೊಳಗಿನ ದುಗ್ಧರಸ ಗ್ರಂಥಿಗಳಲ್ಲಿ ಹಾಡ್ಗ್ಕಿನ್ ಲಿಂಫೋಮಾದ ಲಕ್ಷಣವಾಗಿರಬಹುದು.