ಚಿಕ್ಕಮಗಳೂರು: ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಹೋಂ ಸ್ಟೇನಲ್ಲಿ ನಡೆದಿದೆ.
ಬೇಲೂರು ತಾಲೂಕು ದೇವಲಾಪುರದ 27 ವರ್ಷದ ರಂಜಿತಾ ಮೃತಪಟ್ಟ ಯುವತಿ. ಅವರ ಕುಟುಂಬದವರು ಮೂಡಿಗೆರೆಯಲ್ಲಿ ವಾಸವಾಗಿದ್ದಾರೆ. ರಂಜಿತಾ ಮತ್ತು ಅವರ ಗೆಳತಿ ದಾವಣಗೆರೆ ಮೂಲದ ರೇಖಾ ಬೆಂಗಳೂರಿನಿಂದ ಶುಕ್ರವಾರ ಸಂಜೆ ಹೋಂ ಸ್ಟೇಗೆ ಆಗಮಿಸಿದ್ದರು. ಅವರ ಸ್ನೇಹಿತೆಯ ನಿಶ್ಚಿತಾರ್ತಕ್ಕಾಗಿ ಬಂದಿದ್ದ ಅವರು ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು.
ಶನಿವಾರ ಬೆಳಗ್ಗೆ ರೇಖಾ ಸ್ನಾನ ಮುಗಿಸಿದ ಬಳಿಕ ರಂಜಿತಾ ಸ್ನಾನಕ್ಕೆ ಹೋದವರು ಹೊರಗೆ ಬಂದಿಲ್ಲ. ಅನುಮಾನಗೊಂಡ ರೇಖಾ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಟಕಿಯಿಂದ ನೋಡಿದಾಗ ರಂಜಿತಾ ಸ್ನಾನಗೃಹದಲ್ಲಿ ಕುಸಿದು ಬಿದ್ದಿದ್ದರು. ಕೂಡಲೆ ಹೋಂ ಸ್ಟೇ ಸಿಬ್ಬಂದಿ ನೆರವಿನಿಂದ ಬಾಗಿಲು ಒಡೆದು ಒಳ ಪ್ರವೇಶಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕೂಡಲೇ ಮೂಡಿಗೆರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಈ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ, ಇಲ್ಲವೇ ಹೃದಯಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
