ಖ್ಯಾತ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರು ದುಬಾರಿ ಬೆಲೆಯ ಪೋರ್ಷೆ ಕಾರಿನಲ್ಲಿ ಸಂಚರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಪ್ಪು ಬಣ್ಣದ ಐಷಾರಾಮಿ ಪೋರ್ಷೆ ಕಾರಿನಲ್ಲಿ ಕುಳಿತಿರುವ ಗುರುಗಳು, ರಸ್ತೆಯ ಬದಿಯಲ್ಲಿ ಕಾಯುತ್ತಿದ್ದ ತಮ್ಮ ಭಕ್ತರಿಗೆ ಕೈ ಮುಗಿದು ನಮಸ್ಕರಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಂತಹ ಗಣ್ಯ ವ್ಯಕ್ತಿಗಳು ಪ್ರೇಮಾನಂದ ಮಹಾರಾಜರ ಭಕ್ತರಾಗಿರುವುದು ಈ ವಿಡಿಯೊಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಈ ದಂಪತಿಗಳು ಹಲವು ಬಾರಿ ಮಹಾರಾಜರ ನೈನಿತಾಲ್ ಆಶ್ರಮಕ್ಕೆ ಭೇಟಿ ನೀಡಿ ತಮ್ಮ ಮಕ್ಕಳೊಂದಿಗೆ ಆಶೀರ್ವಾದ ಪಡೆದಿದ್ದಾರೆ.
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿರುವ ಈ ಚಿಕ್ಕ ವಿಡಿಯೊದಲ್ಲಿ, ಗುರುಗಳು ಐಷಾರಾಮಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ, ಅವರ ಸಹಾಯಕರ ಜೊತೆಗೆ ಪೊಲೀಸರು ವಾಹನಕ್ಕೆ ಯಾವುದೇ ಅಡಚಣೆಯಾಗದಂತೆ ಅದರ ಪಕ್ಕದಲ್ಲಿ ಓಡುತ್ತಿರುವುದು ಕಂಡುಬರುತ್ತದೆ.
ವಿಡಿಯೊದಲ್ಲಿ 04/04/2025 ರ ದಿನಾಂಕ ನಮೂದಾಗಿದ್ದರೂ, ಇದು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಖಚಿತವಾಗಿಲ್ಲ. ಈ ಮಾಹಿತಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ಕೆಲವರು ಸರಳ ಜೀವನದ ಸಂದೇಶ ನೀಡುವ ಗುರುಗಳು ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆದರೆ, ತಮ್ಮನ್ನು ಗುರುವಿನ ಭಕ್ತರೆಂದು ಕರೆದುಕೊಳ್ಳುವ ಅನೇಕರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಭಕ್ತರು ತಮ್ಮ ವಾಹನಗಳನ್ನು ಬಳಸಲು ಗುರುಗಳನ್ನು ವಿನಂತಿಸಿಕೊಳ್ಳುವುದು ಸಾಮಾನ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
“ಅದು ಅವರ ಸ್ವಂತ ಪೋರ್ಷೆ ಅಲ್ಲ, ಬದಲಾಗಿ ಅವರಿಗೆ ಲಿಫ್ಟ್ ನೀಡುತ್ತಿರುವ ಅವರ ಭಕ್ತರೊಬ್ಬರ ಕಾರು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಭಕ್ತರು, ಗುರುಗಳು ಆಗಾಗ್ಗೆ ಬೇರೆ ಬೇರೆ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಏಕೆಂದರೆ ಅವರ ಭಕ್ತರು ಅವರನ್ನು ಕರೆದೊಯ್ಯಲು ಮುಂದೆ ಬರುತ್ತಾರೆ ಎಂದು ತಿಳಿಸಿದ್ದಾರೆ.
“ಆ ಕಾರು ಪ್ರೇಮಾನಂದ ಜೀ ಅವರಿಗೆ ಸೇರಿಲ್ಲ. ಭಕ್ತರು ಕೇವಲ ಅವರು ಕುಳಿತುಕೊಳ್ಳುವುದಕ್ಕಾಗಿಯೇ ತಮ್ಮ ಕಾರುಗಳನ್ನು ನೀಡುತ್ತಾರೆ. ನೀವು ನಂಬರ್ ಪ್ಲೇಟ್ ಗಮನಿಸಿ – ಮತ್ತು ಕಾರು ಪ್ರತಿದಿನ ಬದಲಾಗುತ್ತದೆ” ಎಂದು ಇನ್ನೊಬ್ಬರು ಸ್ಪಷ್ಟಪಡಿಸಿದ್ದಾರೆ. ಕಾಮೆಂಟ್ ವಿಭಾಗವು ಗುರುವಿನ ಸರಳ ಜೀವನ ಮತ್ತು ಸಕಾರಾತ್ಮಕ ಬೋಧನೆಗಳನ್ನು ಉಲ್ಲೇಖಿಸಿ ಅವರನ್ನು ಬೆಂಬಲಿಸುವ ಭಕ್ತರಿಂದ ತುಂಬಿ ತುಳುಕುತ್ತಿದೆ.
Porsche for babas and maharajas. People in India don't really understand Marx. pic.twitter.com/pNYzGPWqct
— Lord Immy Kant (Eastern Exile) (@KantInEast) April 11, 2025