ಯಾದಗಿರಿ : ಜಿಲ್ಲೆಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಾನೇ ಹೆತ್ತ 10 ವರ್ಷದ ಮಗಳನ್ನು ಕ್ಷುಲ್ಲಕ ಕಾರಣಕ್ಕೆ ತಾಯಿಯೇ ಕತ್ತು ಹಿಸುಕಿ ಹತ್ಯೆಗೈದಿರುವ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಯಾದಗಿರಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ತಾಯಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುತ್ತಮುತ್ತಲಿನವರಿಗೆ ಮತ್ತು ಪೊಲೀಸರಿಗೆ ನಂಬಿಸಲು ಯತ್ನಿಸಿದ್ದಳು. “ನಾನು ಮಗಳಿಗೆ 15 ರೂಪಾಯಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವಳು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಸುಳ್ಳು ಕಥೆ ಕಟ್ಟಿದ್ದಳು.
ಬಾಲಕಿಯ ಸಾವು ಅನುಮಾನಾಸ್ಪದವಾಗಿ ಕಂಡಿದ್ದರಿಂದ ಪೊಲೀಸರು ತಾಯಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಪೊಲೀಸರ ಸತತ ವಿಚಾರಣೆ ಮತ್ತು ವೈದ್ಯಕೀಯ ತಪಾಸಣೆಯ ನಂತರ, ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಬದಲಿಗೆ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಸತ್ಯ ಬಯಲಾಗಿದೆ.
ಹತ್ಯೆಗೆ ಕಾರಣವೇನು?
ಪ್ರಾಥಮಿಕ ಮಾಹಿತಿಯ ಪ್ರಕಾರ ಮಗಳು ಮದ್ಯ ಸೇವನೆ ಬಿಡು ಎಂದಿದ್ದಕ್ಕೆ ತಾಯಿ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಕ್ಷುಲ್ಲಕ ಜಗಳ ಅಥವಾ ಮನೆಯೊಳಗಿನ ಯಾವುದೋ ಒತ್ತಡದ ಕಾರಣಕ್ಕೆ ತಾಯಿಯೇ ಮಗಳ ಕತ್ತು ಹಿಸುಕಿ ಪ್ರಾಣ ತೆಗೆದಿದ್ದಾಳೆ. ಬಳಿಕ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇದನ್ನು ಆತ್ಮಹತ್ಯೆಯ ಬಣ್ಣ ಬಳಿಯಲು ನಾಟಕವಾಡಿದ್ದಾಳೆ. ಈ ಸಂಬಂಧ ಯಾದಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.

