ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದೆ. 2025 -26 ನೇ ಸಾಲಿನ ವಿವಿಧ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿ ಕೊನೆಯ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ಮೂಲಕ ಗಮನ ಸೆಳೆದಿದೆ. ಸರ್ಕಾರಿ ಸಂಸ್ಥೆಯೊಂದು ಇಷ್ಟು ವೇಗವಾಗಿ ಫಲಿತಾಂಶ ನೀಡಿರುವುದು ಕಾಲೇಜಿನ ಪರಿಶ್ರಮದ ಹೆಗ್ಗುರುತಾಗಿದೆ ಎಂದು ಹೇಳಲಾಗಿದೆ.
ಕಾಲೇಜಿನ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ ಸೇರಿದಂತೆ ವಿವಿಧ ಪದವಿ ಪರೀಕ್ಷೆಗಳು ಜನವರಿ 2ರಿಂದ ಜನವರಿ 31 ರವರೆಗೆ ನಡೆದಿದ್ದವು. ಪರೀಕ್ಷೆಗಳು ಜನವರಿ 31 ರಂದು ಮುಕ್ತಾಯವಾಗಿದ್ದು, ಅದೇ ದಿನ ಸಂಜೆ 4 ಗಂಟೆಗೆ ಮೌಲ್ಯಮಾಪನ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಳಿಸಿ ಮೌಲ್ಯಮಾಪನ ಮುಗಿದ ಕೇವಲ ಒಂದು ಗಂಟೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಫಲಿತಾಂಶ ಬಿಡುಗಡೆ ಮಾಡಿದ್ದಾರೆ.

