ಬೆಂಗಳೂರು: ತ್ಯಾಜ್ಯ ನೀರು ಸೇರ್ಪಡೆಯಾಗಿ ಜೀವ ನದಿ ಕಾವೇರಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಲ ಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ದೂರು ಆಧರಿಸಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದು, ಕಾವೇರಿ ನದಿ ಸೇರುತ್ತಿರುವ ತ್ಯಾಜ್ಯದ ಬಗ್ಗೆ ವರದಿ ನೀಡಲು ತಿಳಿಸಿದ್ದಾರೆ.
ದಿನೇಶ್ ಗೂಳಿಗೌಡ ಅವರ ಮನವಿ ಆಧರಿಸಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರು ಕೂಡ ತಮ್ಮ ಇಲಾಖೆಗಳ ಮುಖ್ಯ ಅಧಿಕಾರಿಗಳಿಗೆ ಈ ಸಂಬಂಧ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ.
ಕಾವೇರಿ ನದಿಗೆ ತ್ಯಾಜ್ಯ ಸೇರುವುದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸಮಿತಿ ರಚಿಸಬೇಕು. ಎರಡು ವಾರದಲ್ಲಿ ಈ ಬಗ್ಗೆ ಸಮಗ್ರ ವರದಿ ನೀಡಬೇಕು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.