ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಉತ್ತರಾಧಿಕಾರಿಯಾಗಿ ಮರು ಘೋಷಿಸಿದ್ದಾರೆ. ಅವರು ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ಮರು ನೇಮಕ ಮಾಡಿದ್ದಾರೆ.
ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಮೇ ತಿಂಗಳ ಆರಂಭದಲ್ಲಿ ಅವರ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಮತ್ತು ಅವರ ಉತ್ತರಾಧಿಕಾರಿ ಹುದ್ದೆಯಿಂದ ತೆಗೆದುಹಾಕಿ ಅವರನ್ನು ಅಪಕ್ವ, ಪ್ರಬುದ್ಧತೆ ಬಂದಿಲ್ಲ ಎಂದು ಹೇಳಿದ್ದರು.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಇಂದು ಲಕ್ನೋದಲ್ಲಿ ಪಕ್ಷದ ಎಲ್ಲಾ ಪದಾಧಿಕಾರಿಗಳ ಸಭೆ ನಡೆಸಿದರು, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಇದು ಮೊದಲನೆ ಸಭೆಯಾಗಿದೆ.
ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸಿದ ಬಿಎಸ್ಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಯುಪಿಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳಲ್ಲಿ ಸ್ಪರ್ಧಿಸಿ, ಆರು ಸ್ಥಾನಗಳನ್ನು ಗೆದ್ದಿತು ಮತ್ತು 9.46 ಶೇಕಡಾ ಮತಗಳನ್ನು ಗಳಿಸಿತು. ಆದರೆ, ಬಿಎಸ್‌ಪಿ ಎಲ್ಲಾ 80 ಸ್ಥಾನಗಳಲ್ಲಿ ಸ್ಪರ್ಧಿಸಿ ಶೇ. 9.19 ರಷ್ಟು ಮತಗಳನ್ನು ಗಳಿಸಿತು.
ಸಭೆಯಲ್ಲಿ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಮತ್ತು ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಮರುಸ್ಥಾಪಿಸುವ ಬಗ್ಗೆ, ಯುಪಿಯ 10 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.