
ಬೆಂಗಳೂರು: ಸರ್ಕಾರಿ ಜಮೀನುಗಳ ರಕ್ಷಣೆಗೆ ಲ್ಯಾಂಡ್ ಬೀಟ್ ಪ್ರೋಗ್ರಾಂಗೆ ಚಾಲನೆ ನೀಡಲಾಗಿದೆ. 14 ಲಕ್ಷ ಸರ್ಕಾರಿ ಆಸ್ತಿಗಳ ಸರ್ವೆ ಸಂಖ್ಯೆ, ಭೌಗೋಳಿಕ ಗಡಿ ಸೇರಿದಂತೆ ಡಿಜಿಟಲ್ ದಾಖಲೆ ಒಳಗೊಂಡ ತಂತ್ರಾಂಶ ಅಭಿವೃದ್ದಿಪಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜಿಪಿಎಸ್ ಬಳಕೆ ಮಾಡಿಕೊಂಡು ಪ್ರತಿ ಆಸ್ತಿಯನ್ನು ತಂತ್ರಾಂಶದಲ್ಲಿ ಮ್ಯಾಪ್ ಮಾಡಲಾಗುವುದು. ಒತ್ತುವರಿ ಪರಿಶೀಲಿಸಲು ಅಧಿಕಾರಿಗಳು ಎಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಯಾವುದೇ ಸಮಸ್ಯೆಯನ್ನು ನೇರವಾಗಿ ತಂತ್ರಾಂಶದ ಮೂಲಕ ವರದಿ ಮಾಡುತ್ತಾರೆ. ನಂತರ ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಇದುವರೆಗೆ ಗ್ರಾಮ ಆಡಳಿತ ಅಧಿಕಾರಿಗಳು 5.9 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಪರಿಶೀಲನೆ ನಡೆಸಿದ್ದು, ಮುಂದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಪರಿಶ್ರಮದಿಂದ ಪ್ರತಿ ಗ್ರಾಮಗಳಲ್ಲಿ ಸರ್ಕಾರಿ ಆಸ್ತಿಗಳ ವಿವರವಾದ ಡಿಜಿಟಲ್ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಈ ಆಸ್ತಿಗಳನ್ನು ಸುರಕ್ಷಿತವಾಗಿಡಲು ಆಗಾಗ ಸ್ಥಳ ಪರಿಶೀಲಿಸಲಾಗುವುದು. ಸರ್ಕಾರಿ ಜಮೀನುಗಳು ಒತ್ತುವರಿಯಾಗಿರುವ ದೀರ್ಘಕಾಲದ ಸಮಸ್ಯೆಗೆ ಹೊಸ ವ್ಯವಸ್ಥೆಯಿಂದ ಪರಿಹಾರ ಸಿಗಲಿದೆ ಎಂದು ಲ್ಯಾಂಡ್ ಬೀಟ್ ಪ್ರೋಗ್ರಾಂ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.