ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಬಾತ್ರೂಮ್ ನಲ್ಲಿ 30ಕ್ಕೂ ಅಧಿಕ ಹಾವುಗಳು ಕಂಡುಬಂದಿದ್ದು, ಬೆಚ್ಚಿ ಬೀಳಿಸುವಂತಿರುವ ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾಗೋನ್ ಜಿಲ್ಲೆಯ ಕಲಿಬೊರ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರು ಮನೆಯೊಂದನ್ನು ಕಟ್ಟಿಸುತ್ತಿದ್ದು, ಬಾತ್ರೂಮ್ ಬಳಿ ಶಬ್ದ ಕೇಳಿ ಬರುತ್ತಿದ್ದ ಕಾರಣ ಪರಿಶೀಲಿಸಿದ ವೇಳೆ ಅವರಿಗೆ ಹಾವು ಕಂಡು ಬಂದಿದೆ. ಕೂಡಲೇ ಸ್ಥಳೀಯ ಉರಗ ತಜ್ಞ ಸಂಜೀವ್ ಡೇಕಾ ಎಂಬವರಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕಾಗಮಿಸಿದ್ದಾರೆ.
ಸೂಕ್ಷ್ಮವಾಗಿ ಪರಿಶೀಲಿಸಿದ ವೇಳೆ ಒಟ್ಟು 35 ಹಾವು ಪತ್ತೆಯಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಬಾತ್ರೂಮ್ನಲ್ಲಿ ಹಾವು ಸೇರಿಕೊಂಡ ವೇಳೆ ಮೊಟ್ಟೆ ಇಟ್ಟಿದ್ದು, ಅವುಗಳು ಒಡೆದು ಮರಿಗಳಾದ ಕಾರಣ ಇಷ್ಟೊಂದು ಹಾವುಗಳು ಪತ್ತೆಯಾಗಿದೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಹಾವುಗಳು ಸಾಮಾನ್ಯವಾಗಿದ್ದು ಕಳೆದ ತಿಂಗಳು ಸಹ ಸಂಜೀವ್ ಡೇಕಾ, ಬೃಹತ್ ಕಾಳಿಂಗ ಸರ್ಪವನ್ನು ಪಾಳು ಬಾವಿಯೊಂದರಲ್ಲಿ ಪತ್ತೆ ಹಚ್ಚಿ ಬಳಿಕ ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು. 35 ಹಾವುಗಳು ಪತ್ತೆಯಾದ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.