ಇಬ್ಬರ ಜೀವ ತೆಗೆದ ಪುಣೆಯಲ್ಲಿ ಜರುಗಿದ ಮಾರಣಾಂತಿಕ ಕಾರು ಅಪಘಾತ ಪ್ರಕರಣದ ಅಪ್ರಾಪ್ತ ಆರೋಪಿ ಆಕ್ಸಿಡೆಂಟ್ ಮಾಡುವ ಮುನ್ನ ಮದ್ಯ ಮತ್ತು ಆಹಾರ ಸೇವನೆಗೆ ಬರೋಬ್ಬರಿ 48 ಸಾವಿರ ರೂ. ಖರ್ಚು ಮಾಡಿದ್ದ ಎಂಬುದು ಈಗ ಬಯಲಾಗಿದೆ.
ಪೋರ್ಷೆ ಕಾರ್ ಅಪಘಾತದಲ್ಲಿ ಭಾಗಿಯಾಗಿರುವ 17 ವರ್ಷದ ಹುಡುಗ ಭಾನುವಾರದಂದು ತನ್ನ ಐಷಾರಾಮಿ ಪೋರ್ಶೆ ಕಾರನ್ನು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಕ್ಷಣವೇ ಇಬ್ಬರು ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಆತ ಭೇಟಿ ನೀಡಿದ್ದ ಎರಡು ಪಬ್‌ಗಳಲ್ಲಿ 90 ನಿಮಿಷಗಳಲ್ಲಿ 48,000 ರೂ. ಮದ್ಯದ ಬಿಲ್ ಮಾಡಿದ್ದ.
ಅಪಘಾತದ ಕೆಲವೇ ಗಂಟೆಗಳ ಮೊದಲು ಅಪ್ತಾಪ್ತ ಆರೋಪಿಗಳು ಕೋಸಿ ರೆಸ್ಟೋರೆಂಟ್ ಮತ್ತು ಹೋಟೆಲ್ ಬ್ಲಾಕ್ ಕ್ಲಬ್ ಗೆ ಹೋಗಿ ಮದ್ಯ ಸೇವಿಸಿದ್ದರು. ಈ ಪಬ್ ಮತ್ತು ರೆಸ್ಟೋರೆಂಟ್‌ಗಳು ಕಾನೂನುಗಳನ್ನು ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯವನ್ನು ಪೂರೈಸಿದ್ದರಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೋಸಿ ರೆಸ್ಟೋರೆಂಟ್ ಮತ್ತು ಹೋಟೆಲ್ ಬ್ಲಾಕ್ ಕ್ಲಬ್ ಎರಡು ಮಳಿಗೆಗಳನ್ನು ಸೀಲ್ ಮಾಡಲಾಗಿದೆ. ಕೋಸಿಯು ಕಲ್ಯಾಣಿನಗರದ ಪಕ್ಕದ ಪ್ರದೇಶವಾದ ಕೋರೆಗಾಂವ್ ಪಾರ್ಕ್‌ನಲ್ಲಿದ್ದರೆ, ಬ್ಲಾಕ್ ಕ್ಲಬ್ ಮುಂಡ್ವಾದಲ್ಲಿದೆ.
ಶನಿವಾರದ ಮಧ್ಯರಾತ್ರಿ, ಅಪ್ತಾಪ್ತ ಆರೋಪಿ ತನ್ನ ಸ್ನೇಹಿತರೊಂದಿಗೆ ರಾತ್ರಿ 9.30 ರಿಂದ 1 ಗಂಟೆಯ ನಡುವೆ ಎರಡು ರೆಸ್ಟೋರೆಂಟ್ ಗೆ ಹೋಗಿ ಮದ್ಯ ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆ ಪೊಲೀಸರು ಇದುವರೆಗೆ 17 ವರ್ಷದ ಬಾಲಕನ ತಂದೆ ಮತ್ತು ಅಪ್ರಾಪ್ತರಿಗೆ ಮದ್ಯ ನೀಡಿದ್ದಕ್ಕಾಗಿ ರೆಸ್ಟೋರೆಂಟ್‌ಗಳ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ್ದಾರೆ.
ತನ್ನ ಪೋರ್ಷೆ ಕಾರನ್ನು ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಯುವ ಐಟಿ ಉದ್ಯೋಗಿಗಳ ಸಾವಿಗೆ ಕಾರಣನಾದ 17 ವರ್ಷದ ಬಾಲಕನಿಗೆ ಮಹಾರಾಷ್ಟ್ರ ಸಾರಿಗೆ ಇಲಾಖೆ 25 ವರ್ಷ ತುಂಬುವವರೆಗೆ ಚಾಲನಾ ಪರವಾನಗಿ ಪಡೆಯುವುದನ್ನು ನಿರ್ಬಂಧಿಸಿದೆ.
ಕಾರ್ ಮಾಲೀಕರು 1,758 ರೂ. ಶುಲ್ಕವನ್ನು ಪಾವತಿಸದ ಕಾರಣ ಮಾರ್ಚ್‌ನಿಂದ ಪೋರ್ಷೆ ಟೇಕಾನ್‌ನ ಶಾಶ್ವತ ನೋಂದಣಿ ಬಾಕಿ ಉಳಿದಿದೆ ಎಂದು ರಾಜ್ಯ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಘಟನೆಯ ನಂತರ ಸಾರ್ವಜನಿಕ ಆಕ್ರೋಶದ ಬಳಿಕ ಪಬ್‌ಗಳು ಮತ್ತು ಪರವಾನಗಿ ಹೊಂದಿರುವ ರೆಸ್ಟೋರೆಂಟ್‌ಗಳು ಅಪ್ರಾಪ್ತ ವಯಸ್ಕರಿಗೆ ಮದ್ಯವನ್ನು ಪೂರೈಸದಿರುವ ಮತ್ತು ಸಮಯದ ಗಡುವನ್ನು ಮೀರಿ ಕಾರ್ಯನಿರ್ವಹಿಸದಿರುವುದವನ್ನು ಖಚಿತಪಡಿಸಿಕೊಳ್ಳಲು ಅಬಕಾರಿ ಇಲಾಖೆಯಿಂದ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ, ಅಂತಹ ಸಂಸ್ಥೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಮತ್ತು ಅವುಗಳ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.