ಕಳ್ಳರ ಗುಂಪೊಂದು ಲಕ್ಸುರಿ ಕಾರಿನಲ್ಲಿ ಬಂದು ಮೇಕೆಗಳನ್ನು ಕದ್ದೊಯ್ದಿರೋ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಕಾರಿನಿಂದ ಇಳಿದ ಕಳ್ಳರ ತಂಡ ಮೇಕೆಗಳನ್ನು ಕದಿಯುವ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಕಾರು ಹೊಂದಿರುವ ಯಾರಾದರೂ ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬುದನ್ನು ನಂಬಲು ಸವಾಲು ಹಾಕಿದೆ.
ಕಳ್ಳರು ರಾತ್ರಿ ವೇಳೆ ಐಷಾರಾಮಿ ಕಾರುಗಳಲ್ಲಿ ಬಂದು ರಸ್ತೆಯಲ್ಲಿ ಕಾರ್ ನಿಲ್ಲಿಸಿ ಕತ್ತಲಲ್ಲಿ ಯಾರಿಗೂ ಗೊತ್ತಾಗದಂತೆ ಮೇಕೆಗಳನ್ನು ತಮ್ಮ ಕಾರಿಗೆ ಎತ್ತಿ ಹಾಕಿಕೊಂಡು ಸ್ಥಳದಿಂದ ಪರಾರಿಯಾಗುತ್ತಾರೆ. ಗಾಜಿಯಾಬಾದ್‌ನ ಮಸೂರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಿರಿದಾದ ಗಲ್ಲಿಗೆ ಹೊಂದಿಕೊಂಡಂತಿರುವ ಮುಖ್ಯರಸ್ತೆಯಲ್ಲಿ ದುಬಾರಿ ಕಾರನ್ನು ನಿಲ್ಲಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನಂತರ ಓರ್ವ ವ್ಯಕ್ತಿ ಕಾರಿನಿಂದ ಇಳಿದು ಮೇಕೆಯನ್ನು ಎತ್ತಿಕೊಂಡು ಹೋಗಿ ಕಾರಿಗೆ ಹಾಕುತ್ತಾನೆ.
ವರದಿಗಳ ಪ್ರಕಾರ ಕಳೆದ ಕೆಲವು ದಿನಗಳಲ್ಲಿ ಸುಮಾರು 27 ಮೇಕೆಗಳನ್ನು ಈ ಕಳ್ಳರ ಗುಂಪು ಕದ್ದೊಯ್ದಿದೆ. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೈರಲ್ ಆಗಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಮೂಲಕ ಕಳ್ಳರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.
ಇದೇ ಮೇ 9ರಂದು ಜವಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳರು 13 ಮೇಕೆಗಳನ್ನು ಕದ್ದೊಯ್ದಿದ್ದರು. ಮೇಕೆಗಳ ಮೌಲ್ಯ 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.