ನವದೆಹಲಿ: ನೈರುತ್ಯ ಮುಂಗಾರು ಮಾರುತಗಳು ಭಾನುವಾರ ನಿಕೋಬಾರ್ ದ್ವೀಪ ಸಮೂಹ ಪ್ರವೇಶಿಸಿವೆ. ದೇಶದ ದಕ್ಷಿಣದ ತುತ್ತ ತುದಿಯ ಪ್ರದೇಶವಾಗಿರುವ ನಿಕೋಬಾರ್ ದ್ವೀಪಗಳ ಮೇಲೆ ಉತ್ತಮ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ.
ನೈರುತ್ಯ ಮುಂಗಾರು ಮಾರುತಗಳು ಮಾಲ್ಡಿವ್ಸ್, ಕಮೋರಿನ್ ದ್ವೀಪಗಳನ್ನು ದಾಟಿ ಬಂಗಾಳಕೊಲ್ಲಿಯ ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಭಾನುವಾರ ಮಳೆ ಸುರಿಸಿವೆ. ಮೇ 31 ರಂದು ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸುವ ಸಾಧ್ಯತೆ ಇದೆ.
ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂದು ಕಳೆದ ತಿಂಗಳುಗಳು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು, ಫೆಸಿಪಿಕ್ ಮಹಾಸಾಗರದ ನೀರು ತಂಪಾಗುವ ಲಾ ನಿನಾ ಈ ವರ್ಷ ಸಂಭವಿಸುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ಉತ್ತಮ ಮಳೆಯಾಗುತ್ತದೆ. ದೇಶದಲ್ಲಿ ಶೇಕಡ 52ರಷ್ಟು ಕೃಷಿ ಚಟುವಟಿಕೆಗಳು ನೇರವಾಗಿ ಮುಂಗಾರು ಮಳೆ ಅವಲಂಬಿಸಿದೆ. ನೈರುತ್ಯ ಮುಂಗಾರು ಮಾರುತಗಳು ದೇಶದ ಕೃಷಿ ಚಟುವಟಿಕೆಯ ಆಧಾರವಾಗಿದೆ. ಈ ಬಾರಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಹೇಳಲಾಗಿದೆ.