ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್ ನಲ್ಲಿನ ಇತ್ತೀಚಿನ ವರದಿಯು ಅತ್ಯಂತ ಅಪರೂಪದ ವೈದ್ಯಕೀಯ ವಿದ್ಯಮಾನ ಪ್ರಕರಣದ ಮೇಲೆ ಬೆಳಕು ಚೆಲ್ಲಿದೆ. 2018 ರಲ್ಲಿ ಇಂಡೋನೇಷ್ಯಾದಲ್ಲಿ ಜನಿಸಿದ ಸಂಯೋಜಿತ ಅವಳಿ ಮಕ್ಕಳಲ್ಲಿ ನಾಲ್ಕು ಕೈಗಳು, ಮೂರು ಕಾಲುಗಳು ಮತ್ತು ಇಬ್ಬರಿಗೂ ಒಂದೇ ಜನನಾಂಗ. ಒಂದೇ ಮೂತ್ರಕೋಶ, ಗುದನಾಳ ಮತ್ತು ಕರುಳನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
ಅಂತಹ ಅವಳಿಗಳನ್ನು ವೈಜ್ಞಾನಿಕವಾಗಿ ಇಶಿಯೋಪಾಗಸ್ ಟ್ರಿಪಸ್ ಎಂದು ಕರೆಯಲಾಗುತ್ತದೆ . ಎರಡು ಮಿಲಿಯನ್ ಗಳಲ್ಲಿ ಇಂತಹ ಒಂದು ಪ್ರಕರಣ ಕಂಡುಬರುತ್ತದೆ. ‘ಸ್ಪೈಡರ್ ಟ್ವಿನ್ಸ್’ ಎಂದೂ ಕರೆಯಲ್ಪಡುವ ಅಂತಹ ಸಂಯೋಜಿತ ಅವಳಿಗಳ ಪ್ರಕರಣ ಬೆರಳೆಣಿಕೆಯಷ್ಟು ಮಾತ್ರ ದಾಖಲಾಗಿದೆ.
ಆದಾಗ್ಯೂ, ಇದುವರೆಗೂ ಅವರ ಪ್ರಕರಣವನ್ನು ಔಪಚಾರಿಕವಾಗಿ ದಾಖಲಿಸಿಲ್ಲ. ಅವಳಿಯ ವಿಶಿಷ್ಟತೆಯ ಹೊರತಾಗಿಯೂ ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಸ್ವತಂತ್ರವಾಗಿ ಕುಳಿತುಕೊಳ್ಳಲು ಸಾಧ್ಯವಾಗದೇ ಹಲವು ಸವಾಲುಗಳನ್ನು ಎದುರಿಸಿದರು.
“ಕಡಿಮೆ ಸಂಖ್ಯೆಯಲ್ಲಿರುವ ಇಂತಹ ಅಪರೂಪ ಪ್ರಕರಣಗಳು ಮತ್ತು ಹೆಚ್ಚಿನ ಸಂಕೀರ್ಣತೆಯಿಂದಾಗಿ ಇಶಿಯೋಪಾಗಸ್ ಟ್ರಿಪಸ್ ಸಂಯೋಜಿತ ಅವಳಿಗಳ ಪ್ರತ್ಯೇಕತೆಯ ಶಸ್ತ್ರಚಿಕಿತ್ಸೆಯು ಸಂಕೀರ್ಣವಾಗಿರುತ್ತದೆ” ಎಂದು ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್ ನಲ್ಲಿ ಲೇಖಕರು ಬರೆದಿದ್ದಾರೆ.
ಅಂತಹ 60% ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಅವಳಿಗಳು ಪ್ರಸವಪೂರ್ವ ಅವಧಿಯಲ್ಲೇ ಬದುಕುಳಿಯುವುದಿಲ್ಲ ಅಥವಾ ಜನನದ ಬಳಿಕ ಸಾವನ್ನಪ್ಪುತ್ತವೆ. ಆದರೂ ಬದುಕುಳಿರುವ ಈ ಮಕ್ಕಳು ವಿಶಿಷ್ಟ ಶರೀರಶಾಸ್ತ್ರದ ಕಾರಣದಿಂದಾಗಿ ಗಮನಾರ್ಹವಾದ ಸವಾಲನ್ನು ಎದುರಿಸಿದರು. ಅವರು ತಮ್ಮ ಜೀವನದ ಮೊದಲ ಮೂರು ವರ್ಷಗಳವರೆಗೆ ಸ್ವತಂತ್ರವಾಗಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ.
ಅದೃಷ್ಟವಶಾತ್, ನುರಿತ ಶಸ್ತ್ರಚಿಕಿತ್ಸಾ ತಂಡವು ಅವರ ಸೊಂಟ ಮತ್ತು ಪೆಲ್ವಿಕ್ ಬೋನ್ ರಚನೆಯನ್ನು ಸ್ಥಿರಗೊಳಿಸುವಾಗ ಅವರ ಮೂರನೇ ಪಾದವನ್ನು ಪ್ರತ್ಯೇಕಿಸುವ ಸೂಕ್ಷ್ಮ ವಿಧಾನವನ್ನು ನಿರ್ವಹಿಸಿತು. ಇದರಿಂದ ಅವರು ನೇರವಾಗಿ ಕುಳಿತುಕೊಳ್ಳುವ ಸಾಮರ್ಥ್ಯ ಪಡೆದರು. ಅವಳಿಗಳ ಮೇಲೆ ನಡೆಸಿದ ಶಸ್ತ್ರಚಿಕಿತ್ಸೆಯ ಅವಧಿಯನ್ನು ಬಹಿರಂಗಪಡಿಸಲಾಗಿಲ್ಲ, ಆದರೂ ಇದು ಯಾವುದೇ ತೊಡಕುಗಳಿಲ್ಲದೆ ಸರಾಗವಾಗಿ ನಡೆದಿರುವ ವರದಿಯಾಗಿದೆ.
ಅವಳಿಗಳಲ್ಲಿ ಒಂದು ಮಗುವಿಗೆ ಸರಿಯಾಗಿ ಬೆಳೆಯದ ಮೂತ್ರಪಿಂಡವಿದ್ದರೆ, ಮತ್ತೊಂದು ಮಗು ಒಂದೇ ಮೂತ್ರಪಿಂಡವನ್ನು ಹೊಂದಿದೆ ಎಂದು ವೈದ್ಯಕೀಯ ವೃತ್ತಿಪರರು ಗಮನಿಸಿದರು. ಇಂತಹ ಸಮಸ್ಯೆ ಮಕ್ಕಳ ಕುಟುಂಬಸ್ಥರಲ್ಲಿ ಯಾರಲ್ಲೂ ಕಂಡುಬಂದಿಲ್ಲ ಮತ್ತು ಅವಳಿಗಳಿಗೆ ಈಗಾಗಲೇ ಇಬ್ಬರು ಹಿರಿಯ ಒಡಹುಟ್ಟಿದವರಿದ್ದರು.
ಶಸ್ತ್ರಚಿಕಿತ್ಸೆಯ ನಂತರದ ಮೂರು ತಿಂಗಳ ಬಳಿಕ ಉತ್ತಮ ಫಲಿತಾಂಶ ಕಂಡಿದ್ದು, ಅವಳಿಗಳಲ್ಲಿ ಯಾವುದೇ ತೊಡಕುಗಳ ಲಕ್ಷಣಗಳಿಲ್ಲ. ಇನ್ನೂ ಸಂಯೋಜಿತ ಅವಳಿಗಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ನಡೆದಿಲ್ಲ. ಭವಿಷ್ಯದಲ್ಲಿ ಅಂತಹ ಸಂಕೀರ್ಣ ವಿಧಾನವನ್ನು ಪ್ರಯತ್ನಿಸಲಾಗುತ್ತದೆಯೇ ಎಂಬುದು ಸಹ ಸದ್ಯಕ್ಕೆ ತಿಳಿದುಬಂದಿಲ್ಲ.