ಸಣ್ಣ ಸಣ್ಣ ಕಾರಣಗಳಿಗೆ ವಿಚ್ಛೇದನ ಕೇಳುವುದು ಸಾಮಾನ್ಯವಾಗಿ ಹೋಗಿದೆ. ಇಂತಹ ವಿಲಕ್ಷಣ ಘಟನೆಯೊಂದರಲ್ಲಿ, ಪ್ರತಿದಿನ ಐದು ರೂಪಾಯಿಯ ಕುರ್ಕುರೆ ಪ್ಯಾಕೆಟ್ ತರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತ್ನಿ ಡಿವೋರ್ಸ್ ಕೇಳಿದ್ದಾಳೆ. ಇಂತಹ ಕ್ಷುಲ್ಲಕ ಕಾರಣ ನೀಡಿ ವಿಚ್ಛೇದನ ಕೇಳಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಕೌಟುಂಬಿಕ ಸಲಹಾ ಕೇಂದ್ರದ ಸಮಾಲೋಚಕ ಡಾ. ಸತೀಶ್ ಖಿರ್ವಾರ್ ಅವರ ಪ್ರಕಾರ, ಕುರುಕಲು ತಿಂಡಿ ತಿನ್ನುವ ಗೀಳು ಹೊಂದಿದ್ದ ಪತ್ನಿ ಪ್ರತಿದಿನ ಕುರ್ಕುರೆ ತರುವಂತೆ ಗಂಡನಿಗೆ ಹೇಳಿದ್ದಾಳೆ. ಆದರೆ ಆತ ಕೆಲಸದ ಒತ್ತಡದಲ್ಲಿ ಮರೆತುಬಿಡುತ್ತಿದ್ದ. ಇದಕ್ಕೆ ಸಿಟ್ಟಾದ ಹೆಂಡ್ತಿ ಸ್ವತಃ ಕುರ್ಕುರೆ ಖರೀದಿಸಲು ನಿರ್ಧರಿಸಿದಾಗ ಸಂಘರ್ಷ ಉಂಟಾಗಿದೆ. ಇಬ್ಬರ ನಡುವಿನ ಜಗಳ ತಾರಕ್ಕಕೇರಿದಾಗ ಹೆಂಡತಿ ತನ್ನ ತವರು ಮನೆಗೆ ಹೋಗಿದ್ದಾಳೆ.
ತವರುಮನೆಯಲ್ಲೇ ಎರಡು ತಿಂಗಳ ಕಾಲ ಉಳಿದಿದ್ದ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಳೆ. ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿ ಆರಂಭದಲ್ಲಿ ಚೆನ್ನಾಗೇ ಇದ್ದರು. ಪತಿ ವೃತ್ತಿಯಲ್ಲಿ ಬೆಳ್ಳಿ ಕುಶಲಕರ್ಮಿಯಾಗಿದ್ದು ಮದುವೆಯ ನಂತರ 6 ತಿಂಗಳವರೆಗೆ ಕುರ್ಕುರೆ ತರುತ್ತಿದ್ದ. ಆದರೆ ನಂತರ ಅವರ ವರ್ತನೆ ಬದಲಾಯಿತು, ಹೆಂಡತಿ ಆದ್ಯತೆಗೆ ಗಮನ ಕೊಡುತ್ತಿಲ್ಲವೆಂದು ಪತ್ನಿ ಆರೋಪಿಸಿದ್ದಾಳೆಂದು ಹೇಳಿದ್ದಾರೆ.