ಸಾಹಸ ಪ್ರಿಯರು ಉತ್ತರಾಖಂಡದಂತಹ ತಾಣಗಳಲ್ಲಿ ಸಾಹಸ ಕ್ರೀಡೆಗಳನ್ನು ಆಡಲು ಬಯಸುತ್ತಾರೆ. ಪ್ರಕೃತಿಯ ನಡುವೆ ವಿಶಿಷ್ಟವಾದ ಅನುಭವ ಪಡೆಯುತ್ತಾರೆ. ಅದರಲ್ಲೂ ರಿವರ್ ರಾಫ್ಟಿಂಗ್ ಇಷ್ಟಪಡುವವರಂತೂ ಈ 5 ರಾಜ್ಯಗಳಿಗೆ ಭೇಟಿ ನೀಡಲೇಬೇಕು. ಇಲ್ಲಿ ರಿವರ್ ರಾಫ್ಟಿಂಗ್ನ ಅನನ್ಯ ಅನುಭವವಾಗುತ್ತದೆ.
ಕಾಳಿ ನದಿ, ಕರ್ನಾಟಕ
ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವ ಕರ್ನಾಟಕದ ಕಾಳಿ ನದಿಯು ಹಚ್ಚ ಹಸಿರಿನ ಮತ್ತು ಜಲಪಾತಗಳ ನಡುವೆ ರೋಮಾಂಚನಕಾರಿ ರಾಫ್ಟಿಂಗ್ ಅನುಭವವನ್ನು ನೀಡುತ್ತದೆ. ಈ ನದಿಯು ಗ್ರೇಡ್ III ಮತ್ತು IV ರಾಪಿಡ್ಗಳನ್ನು ಹೊಂದಿದೆ, ಇದು ಸಾಹಸ ಪ್ರಿಯರಿಗೆ ಉತ್ತಮ ಸ್ಥಳ. ದಾಂಡೇಲಿಯಿಂದ ಕುರುಂದವಾಡದವರೆಗಿನ ವಿಸ್ತಾರವು ರಾಫ್ಟಿಂಗ್ಗೆ ಹೆಚ್ಚು ಜನಪ್ರಿಯವಾಗಿದೆ.
ಮಾಂಡೋವಿ- ವಾಲ್ಪೋಯ್ ನದಿ, ಗೋವಾ
ಗೋವಾ ತನ್ನ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಆದರೆ ಮಾಂಡೋವಿ ಮತ್ತು ವಾಲ್ಪೋಯ್ ನದಿಗಳಲ್ಲಿ ರಾಫ್ಟಿಂಗ್ನ ರೋಮಾಂಚನ ಸಹ ಅದ್ಭುತವಾಗಿರುತ್ತದೆ. ಕಾಡಿನ ಮೂಲಕ ಹರಿಯುವ ಈ ನದಿಯು ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಅವಕಾಶ ಒದಗಿಸುತ್ತದೆ. ಗೋವಾದಲ್ಲಿ ರಾಫ್ಟಿಂಗ್ ಆನಂದಿಸಲು ಉತ್ತಮ ಸಮಯವೆಂದರೆ ಮಾನ್ಸೂನ್.
ಝನ್ಸ್ಕರ್ ನದಿ, ಲಡಾಖ್
ಝನ್ಸ್ಕರ್ ನದಿಯಲ್ಲಿ ರಾಫ್ಟಿಂಗ್ ಮಾಡುವ ಮೂಲಕ ಸಾಹಸ ಪ್ರಿಯರು ಸ್ಮರಣೀಯ ಅನುಭವ ಪಡೆಯಬಹುದು. ಈ ಸ್ಥಳವು ವಿಶ್ವದ ಅತಿ ಎತ್ತರದ ರಾಫ್ಟಿಂಗ್ ಸ್ಥಳಗಳಲ್ಲಿ ಒಂದಾಗಿದೆ. ಆದರೆ ಇದು ಅನುಭವಿ ರಾಫ್ಟರ್ಗಳಿಗೆ ಮಾತ್ರ ಸೂಕ್ತವಾಗಿದೆ. ರಾಫ್ಟಿಂಗ್ ಸೀಸನ್ ಜುಲೈ ಮತ್ತು ಆಗಸ್ಟ್ನಲ್ಲಿ ಕೆಲವು ವಾರಗಳವರೆಗೆ ಮಾತ್ರ ತೆರೆದಿರುತ್ತದೆ.
ತೀಸ್ತಾ ನದಿ, ಸಿಕ್ಕಿಂ
ಸಿಕ್ಕಿಂನ ತೀಸ್ತಾ ನದಿಯಲ್ಲಿ ರಾಫ್ಟಿಂಗ್ ಆನಂದಿಸಬಹುದು. ನದಿಯ ವೇಗದ ಹರಿವು ಮತ್ತು ರಭಸ ರಾಫ್ಟಿಂಗ್ ಉತ್ಸಾಹಿಗಳನ್ನು ರೋಮಾಂಚನಗೊಳಿಸುತ್ತವೆ. ಇಲ್ಲಿ ರಾಫ್ಟಿಂಗ್ ಸೀಸನ್ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳ ನಡುವೆ ಇರುತ್ತದೆ.
ಕುಲು, ಹಿಮಾಚಲ ಪ್ರದೇಶ
ಕುಲು, ಹಿಮದಿಂದ ಆವೃತವಾದ ಶಿಖರಗಳು ಮತ್ತು ಹಚ್ಚ ಹಸಿರಿನ ಸಸ್ಯವರ್ಗದಿಂದ ಕಣ್ಸೆಳೆಯುತ್ತದೆ. ಇಲ್ಲಿನ ಬಿಯಾಸ್ ನದಿಯಲ್ಲಿ ರಾಫ್ಟಿಂಗ್ ಅನ್ನು ಆನಂದಿಸಬಹುದು. ಕುಲುವಿನಲ್ಲಿ ರಾಫ್ಟಿಂಗ್ ಆರಂಭಿಕರು ಮತ್ತು ಅನುಭವಿಗಳು ಇಬ್ಬರಿಗೂ ಹೇಳಿ ಮಾಡಿಸಿದಂತಿರುತ್ತದೆ. ಇಲ್ಲಿ ರಾಫ್ಟಿಂಗ್ ಸೀಸನ್ ಏಪ್ರಿಲ್ ನಿಂದ ಅಕ್ಟೋಬರ್ ತಿಂಗಳ ನಡುವೆ ಇರುತ್ತದೆ.
ಸಿಯಾಂಗ್ ನದಿ, ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶದ ಸಿಯಾಂಗ್ ನದಿ ಕೂಡ ರಾಫ್ಟಿಂಗ್ಗೆ ಉತ್ತಮವಾಗಿದೆ. ಈ ಪ್ರಯಾಣದಲ್ಲಿ ದಟ್ಟ ಕಾಡು, ಕಡಿದಾದ ಕಣಿವೆ ಮತ್ತು ಬುಡಕಟ್ಟು ಹಳ್ಳಿಗಳ ಸುಂದರ ನೋಟಗಳನ್ನು ಆನಂದಿಸಬಹುದು.