ಗ್ರೀನ್ ಟೀ ಅತ್ಯಂತ ಆರೋಗ್ಯಕರ ಪಾನೀಯಗಳಲ್ಲೊಂದು. ಹೊಸದೊಂದು ಸಂಶೋಧನೆಯ ಪ್ರಕಾರ ಗ್ರೀನ್ ಟೀ ಕುಡಿಯುವುದರಿಂದ ನಮ್ಮ ಮಾನಸಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. ಮಾನಸಿಕ ಜಾಗರೂಕತೆಯನ್ನು ಹೆಚ್ಚಿಸುತ್ತದೆ.
ಈ ಅಧ್ಯಯನವನ್ನು ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್ನಲ್ಲಿ ಪ್ರಕಟಿಸಲಾಗಿದೆ. ಗ್ರೀನ್ ಟೀ ಅಥವಾ ಹುರಿದ ಗ್ರೀನ್ ಟೀ ಕುಡಿಯುವುದರಿಂದ ಮಾನಸಿಕ ಕಾರ್ಯಗಳ ಕಾರ್ಯಕ್ಷಮತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಶೀಲಿಸಲಾಗಿದೆ. ಅಧ್ಯಯನವು ಸರಾಸರಿ 23 ವರ್ಷ ವಯಸ್ಸಿನ 20 ಆರೋಗ್ಯವಂತ ಜಪಾನಿನ ಪುರುಷರನ್ನು ಒಳಗೊಂಡಿತ್ತು. ಅಧ್ಯಯನದಲ್ಲಿ ಪಾಲ್ಗೊಂಡವರು ದಿನಕ್ಕೆ ಎರಡು ಬಾರಿ ಐದು ನಿಮಿಷಗಳ ಅಂಕಗಣಿತವನ್ನು ಆರು ಬಾರಿ ಪೂರ್ಣಗೊಳಿಸಿದ್ದಾರೆ.
ಮೊದಲ ಮೂರು ಗಣಿತ ಬಿಡಿಸುವ ಮೊದಲು ಬಿಸಿನೀರನ್ನು ಸೇವಿಸಿದರು. ನಂತರ ಉಳಿದ ಮೂರು ಗಣಿತಗಳನ್ನು ಬಿಡಿಸುವ ಮುನ್ನ ಗ್ರೀನ್ ಟೀ ಅಥವಾ ಹುರಿದ ಗ್ರೀನ್ ಟೀಯನ್ನು ಸೇವಿಸಿದ್ದಾರೆ. ನಂತರ ಮತ್ತೆ ವಿಶ್ರಾಂತಿ ಪಡೆದಿದ್ದಾರೆ. ಈ ಪ್ರಕ್ರಿಯೆಯು ಒಂದು ತಿಂಗಳ ನಂತರ ಮತ್ತೆ ಪುನರಾವರ್ತನೆಯಾಗಿದೆ. ಎಲ್ಲರ ಚಹಾದ ಪ್ರಕಾರವನ್ನು ಬದಲಾಯಿಸಲಾಯಿತು.
ಮಾನಸಿಕ ಕಾರ್ಯಕ್ಷಮತೆಯ ಮೇಲೆ ಬಿಸಿನೀರು, ಗ್ರೀನ್ ಟೀ ಅಥವಾ ಹುರಿದ ಗ್ರೀನ್ ಟೀ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಣಯಿಸಲು ಸಂಶೋಧಕರು 11 ವಿಭಿನ್ನ ಶಾರೀರಿಕ ಪ್ರತಿಕ್ರಿಯೆಗಳನ್ನು ಅಳೆದಿದ್ದಾರೆ. ಆಯಾಸ, ಒತ್ತಡ, ಮಾನಸಿಕ ಕೆಲಸದ ಹೊರೆ ಮತ್ತು ಅವರ ಶಾರೀರಿಕ ಡೇಟಾವನ್ನು ಸಂಗ್ರಹಿಸಿದ್ದಾರೆ.
ಅಧ್ಯಯನದ ಫಲಿತಾಂಶಗಳು ಸಕಾರಾತ್ಮಕವಾಗಿವೆ. ಗ್ರೀನ್ ಟೀ ಸೇವನೆ ಮಾಡಿದವರು ಅಂಕಗಣಿತದಲ್ಲಿ ಸಾಕಷ್ಟು ಬುದ್ಧಿವಂತಿಕೆ ತೋರಿದ್ದಾರೆ. ಕೆಲಸದ ನಿಖರತೆಯಲ್ಲಿ ಹೆಚ್ಚಳ, ಪ್ರತಿಕ್ರಿಯೆ ಸಮಯದಲ್ಲಿ ಕಡಿತ, ಆಯಾಸ ಮತ್ತು ಒತ್ತಡದ ಕಡಿತ ಹೀಗೆ ಅನೇಕ ಬದಲಾವಣೆಗಳು ಕಂಡುಬಂದಿವೆ.
ಆದರೆ ಗ್ರೀನ್ ಟೀಯನ್ನು ಮಿತವಾಗಿ ಸೇವನೆ ಮಾಡಬೇಕು. ಆದರೆ ಈ ಅಧ್ಯಯನ ಪುರುಷರನ್ನು ಮಾತ್ರ ಒಳಗೊಂಡಿತ್ತು. ಭವಿಷ್ಯದ ಅಧ್ಯಯನಗಳಲ್ಲಿ ಮಹಿಳೆಯರನ್ನು ಸೇರಿಸಿಕೊಂಡು ಗ್ರೀನ್ ಟೀಯಿಂದಾಗುವ ದೀರ್ಘಕಾಲೀನ ಪರಿಣಾಮಗಳನ್ನು ಪರಿಶೀಲಿಸಬೇಕಿದೆ. ತುಂಬಾ ದಣಿದಿದ್ದಾಗ ಮಾನಸಿಕವಾಗಿ ಎಚ್ಚರವಾಗಿರಲು ಬಯಸಿದರೆ ಒಂದು ಕಪ್ ಗ್ರೀನ್ ಟೀ ಸವಿಯಬಹುದು.