ಬೆಂಗಳೂರು: ಸಿಇಟಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಮೊದಲೇ ಪಿಯುಸಿ ಪಠ್ಯ ಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಿಇಟಿಯಲ್ಲಿ ಸಾಕಷ್ಟು ಪಠ್ಯೇತರ ಪ್ರಶ್ನೆಗಳನ್ನು ಕೇಳಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ಪ್ರಾಧಿಕಾರ ಪಠ್ಯಕ್ರಮದ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ಕೋರಿರುವುದು ಬೆಳಕಿಗೆ ಬಂದಿದೆ.
ಏಪ್ರಿಲ್ 19ರಂದು ಸಿಇಟಿಯ ಕೊನೆಯ ದಿನ ಕೆಇಎ ಕಾರ್ಯನಿರ್ವಹಣಾ ನಿರ್ದೇಶಕಿ ರಮ್ಯಾ ಅವರು ಪಿಯು ಇಲಾಖೆಗೆ ಪತ್ರ ಬರೆದು 2023- 24ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳ ಪಠ್ಯಕ್ರಮ ಪರಿಷ್ಕರಿಸಿದಲ್ಲಿ ಪರಿಷ್ಕರಿಸಿದ ಪಠ್ಯಕ್ರಮ ಮತ್ತು ಸಂಬಂಧಿಸಿದ ಆದೇಶ ನೀಡುವಂತೆ ಕೋರಿದ್ದಾರೆ.
ಪಿಯುಸಿ ಪರಿಷ್ಕೃತ ಪಠ್ಯಕ್ರಮದ ಮಾಹಿತಿ ಪಡೆಯದೇ ಹಳೆಯ ಪಠ್ಯ ಕ್ರಮವನ್ನೇ ಆಧರಿಸಿ ಸಿಇಟಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ ಎನ್ನುವ ಅನುಮಾನ ಮೂಡಿದೆ. ನಾಲ್ಕು ವಿಷಯಗಳಲ್ಲಿ ಐವತ್ತಕ್ಕೂ ಅಧಿಕ ಪಠ್ಯೇತರ ಪ್ರಶ್ನೆಗಳನ್ನು ಕೇಳಿದ ಲೋಪಕ್ಕೆ ಇದು ಕಾರಣವಾಗಿರಬಹುದು ಎನ್ನಲಾಗಿದೆ.
ಪ್ರಾಧಿಕಾರದ ಪತ್ರಕ್ಕೆ ಅದೇ ದಿನ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸಿಂಧು ರೂಪೇಶ್ ಪ್ರತಿಕ್ರಿಯೆ ನೀಡಿ ಪತ್ರ ಬರೆದಿದ್ದಾರೆ. 2023 -24ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮ ಪರಿಷ್ಕರಣೆಯಾದ ಬಗ್ಗೆ ಕಳೆದ ಜೂನ್ ನಲ್ಲೇ ಪ್ರಾಧಿಕಾರಕ್ಕೆ ನೀಡಿದ ಪತ್ರ ವ್ಯವಹಾರವನ್ನು ಉಲ್ಲೇಖಿಸಿದ್ದಾರೆ.
50ಕ್ಕೂ ಅಧಿಕ ಪಠ್ಯೇತರ ಪ್ರಶ್ನೆಗಳು ಕೇಳಿದ್ದು, ಸಿಇಟಿ ಪರೀಕ್ಷೆಯಲ್ಲಿ ಉಂಟಾದ ಗೊಂದಲದ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರಿಂದ ಆಕ್ರೋಶ ವ್ಯಕ್ತವಾಗಿದೆ. ಫಲಿತಾಂಶದ ಬಗ್ಗೆ ಗೊಂದಲ, ಆತಂಕವಿದ್ದರೂ ಸರ್ಕಾರ ಮಧ್ಯ ಪ್ರವೇಶಿಸಿಲ್ಲ ಎಂದು ದೂರಲಾಗಿದೆ.