ಚಂಡಿಗಢ: ಪುತ್ರಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರಿಂದ ಕೋಪಗೊಂಡ ಪೋಷಕರು ವರನ ತಾಯಿಯನ್ನು ಥಳಿಸಿ ಅರಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಪಂಜಾಬ್ ರಾಜ್ಯದ ತರಣ್ ತರಣ್ ಜಿಲ್ಲೆಯ ವಾಲ್ಟೋಹಾ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತೆಯ ಮಗ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಯುವತಿಯ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ. ಅವರು ವರನ ತಾಯಿಯ ಮೇಲೆ ತಮ್ಮ ಆಕ್ರೋಶ ತೀರಿಸಿಕೊಂಡಿದ್ದಾರೆ. ಯುವತಿಯ ಮನೆಯವರು ವರನ ತಾಯಿಯನ್ನು ಅರೆಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ.
ಸಂತ್ರಸ್ತೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಆಕೆ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಯುವತಿ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ್ದಾರೆ. ಅವರು ಅವಳನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು ಎಂದು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಕುಲ್ವಿಂದರ್ ಕೌರ್ ಮಣಿ, ಶರಣಜಿತ್ ಸಿಂಗ್ ಶಾನಿ ಮತ್ತು ಗುರ್ಚರಣ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.