ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕೆ.ಇ. ಕಾಂತೇಶ್ ಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಯಡಿಯೂರಪ್ಪನವರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯವನ್ನೂ ನಡೆಸುತ್ತಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಈಶ್ವರಪ್ಪನವರಿಗೆ ಕರೆ ಮಾಡಿ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದರೂ ಸಹ ಇದಕ್ಕೆ ಸೊಪ್ಪು ಹಾಕದೆ ಸ್ಪರ್ಧೆಗೆ ಮುಂದಾಗಿದ್ದಾರೆ. ಅಲ್ಲದೆ ತಮಗೆ ದೆಹಲಿಗೆ ಬರುವಂತೆ ಹೇಳಿದ್ದ ಅಮಿತ್ ಶಾ ಬಳಿಕ ಭೇಟಿಯಾಗಲು ನಿರಾಕರಿಸಿದ್ದು ಕೂಡಾ ಈಶ್ವರಪ್ಪನವರಿಗೆ ನೋವು ತಂದಿದೆ ಎನ್ನಲಾಗಿದೆ. ಹೀಗಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಶತಃಸಿದ್ಧ ಎಂಬ ಮಾತುಗಳನ್ನು ಈಶ್ವರಪ್ಪ ಆಡುತ್ತಿದ್ದಾರೆ.
ಈಗಾಗಲೇ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದು, ಮೋದಿ ಅವರ ಕೈ ಬಲಪಡಿಸಲು ಹಾಗೂ ಯಡಿಯೂರಪ್ಪ ಮತ್ತವರ ಪುತ್ರರ ಮೇಲಿನ ಹಿಡಿತವನ್ನು ತಪ್ಪಿಸುವುದಕ್ಕಾಗಿ ತಮ್ಮ ಸ್ಪರ್ಧೆ ಎಂದು ಹೇಳುತ್ತಿರುವ ಈಶ್ವರಪ್ಪ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಬಳಸುತ್ತಿದ್ದಾರೆ.
ಕೆಎಸ್ ಈಶ್ವರಪ್ಪ, ಮೋದಿ ಅವರ ಭಾವಚಿತ್ರ ಬಳಸುತ್ತಿರುವುದಕ್ಕೆ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ವ್ಯಂಗ್ಯವಾಡಿದ್ದು, ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಈಶ್ವರಪ್ಪ, ಮೋದಿ ರಾಘವೇಂದ್ರ ಅವರ ಅಪ್ಪನ ಮನೆ ಆಸ್ತಿನಾ ಎಂದು ಪ್ರಶ್ನಿಸಿದ್ದರು. ಇದೀಗ ಮತ್ತೊಂದು ಎಚ್ಚರಿಕೆಯ ನಡೆಯನ್ನು ಅವರು ಅನುಸರಿಸಿದ್ದು, ಮೋದಿ ಅವರ ಭಾವಚಿತ್ರ ಬಳಕೆ ಕುರಿತಂತೆ ಶಿವಮೊಗ್ಗ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.