ಬೆಂಗಳೂರು: ಬೆಂಗಳೂರಿನ ನಗರ್ತಪೇಟೆಯ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಾರ್ಚ್ 17ರಂದು ನಡೆದಿತ್ತು. ಇದೀಗ ಹಲ್ಲೆಗೊಳಗಾದವರ ವಿರುದ್ಧವೇ ಎಫ್ ಐ ಆರ್ ದಾಖಲಾಗಿದೆ.
ಘಟನೆ ಬಳಿಕ ಪೊಲೀಸರು ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ಆರೋಪಿ ಸುಲೇಮಾನ್ ಎಂಬಾತನ ತಾಯಿ ಅಂಗಡಿಯಲ್ಲಿದ್ದಾತ ಹಲ್ಲೆಗೊಳಗಾಗಿದ್ದ ಮುಖೇಶ್ ಎಂಬಾತನ ವಿರುದ್ಧ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎಸ್ ಸಿ ಆರ್ ದಾಖಲಿಸಿಕೊಂಡಿದ್ದರು.
ಇದೀಗ ಕೋರ್ಟ್ ಅನುಮತಿ ಪಡೆದು ಮುಖೇಶ್ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
ಮುಖೇಶ್ ಘಟನೆಗೂ ಮೊದಲು 3-4 ದಿನಗಳಿಂದ ಜೋರಾಗಿ ಸೌಂಡ್ ಸಿಸ್ಟಂ ಹಾಕಿದ್ದ ಎನ್ನಲಾಗಿದೆ. ಸೌಂಡ್ ಸಿಸ್ಟಂ ಹಾಕಿದ್ದರಿಂದ ರಂಜಾನ್ ಹಿನ್ನೆಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿದೆ. ಇದೇ ಕಾರಣಕ್ಕೆ ನನ್ನ ಮಗ ಹಾಗೂ ಸ್ನೇಹಿತರು ಯಾಕೆ ಇಷ್ಟು ಜೋರಾಗಿ ಸೌಂಡ್ ಸಿಸ್ಟಮ್ ಹಾಕಿದ್ದೀಯಾ? ಎಂದು ಕೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ ಎಂದು ಸುಲೇಮಾನ್ ತಾಯಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹಲ್ಲೆಗೊಳಗಾಗಿದ್ದ ಮುಖೇಶ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.