ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಚಟುವಟಿಕೆ ನಿರ್ವಹಣೆಗೆ ರೈತರಿಗೆ ಸಾಲ ಅನಿವಾರ್ಯವಾಗಿದ್ದು, ಸರ್ಕಾರ ಈಗಾಗಲೇ ಶೂನ್ಯ ಬಡ್ಡಿ ದರದಲ್ಲಿ ಬ್ಯಾಂಕುಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಸಾಲ ನೀಡುತ್ತಿದೆ.
2023 -24ನೇ ಸಾಲಿನಲ್ಲಿ 23 ಲಕ್ಷ ರೈತರು 19,000 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ. ಇದರಲ್ಲಿ 989 ಕೋಟಿ ರೂ. ಬಡ್ಡಿ ಮನ್ನಾ ಆಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್, ಲ್ಯಾಂಪ್ಸ್ ಸಹಕಾರ ಸಂಘ, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದ್ದು, ಕೃಷಿ ಸಾಲ ಪ್ರಮಾಣ ಹೆಚ್ಚಳ ಮಾಡಲಾಗಿದೆ.
ರೈತರು ದೀರ್ಘಾವಧಿ ಸಾಲಕ್ಕಿಂತ ಮಧ್ಯಮಾವಧಿ, ಅಲ್ಪಾವಧಿ ಸಾಲದ ಮೊರೆ ಹೋಗುತ್ತಿದ್ದಾರೆ. ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲದ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವ ಮೂಲಕ ಸರ್ಕಾರ ನೆರವು ನೀಡುತ್ತಿವೆ.
ರೈತರು ಸಾಲ ಪಡೆಯುವ ಪ್ರಮಾಣ ಹೆಚ್ಚಾಗಿದೆ. ಬೆಳೆ ಸಾಲದ ಜೊತೆಗೆ ರೈತರಿಗೆ ವಿವಿಧ ಉದ್ದೇಶಗಳಿಗಾಗಿ ಸಾಲ ಪಡೆಯಲು ಅವಕಾಶವಿದ್ದು, ಕೃಷಿ ಜಮೀನು ಇಲ್ಲವೇ ಬೆಳೆ ಆಧಾರವಾಗಿಟ್ಟುಕೊಂಡು ಸಾಲ ನೀಡಲಾಗುತ್ತಿದೆ. ಅಲ್ಪಾವಧಿ ಸಾಲ ಒಂದು ವರ್ಷ, ಮಧ್ಯಮಾವಧಿ ಸಾಲ ಐದು ವರ್ಷ, ದೀರ್ಘಾವಧಿ ಸಾಲವನ್ನು 10 ವರ್ಷದ ಅವಧಿವರೆಗೆ ವಿತರಿಸಲಾಗುವುದು ಎನ್ನಲಾಗಿದೆ.