ಬೆಂಗಳೂರು: ವಿವಾದಗಳಿಂದ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೊಂದು ಅಚ್ಚರಿ ಬೆಳವಣಿಗೆ ನಡೆದಿದೆ. ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಆಯ್ಕೆ ಪಟ್ಟಿ ಕಚೇರಿಯಿಂದಲೇ ನಾಪತ್ತೆಯಾಗಿದ್ದು, ಪೊಲೀಸ್ ಠಾಣೆಗೆ ಕೆಪಿಎಸ್ ಅಧಿಕಾರಿ ದೂರು ನೀಡಿದ್ದಾರೆ.
2016ರಲ್ಲಿ ಕೊಳಗೇರಿ ಮಂಡಳಿಯ 9 ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಅದರ ವಿರುದ್ಧ ವ್ಯಕ್ತಿಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶದಂತೆ ಕೆ.ಪಿ.ಎಸ್.ಸಿ. ಗೌಪ್ಯ ಶಾಕೆ 3ರಲ್ಲಿ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. 2018 ಜನವರಿ 22ರಂದು ಕೆ.ಪಿ.ಎಸ್.ಸಿ. ಆಪ್ತ ಶಾಖೆಗೆ ಕಡತ ರವಾನಿಸಲಾಗಿದ್ದು, ಅಲ್ಲಿ ಸ್ವೀಕೃತವಾಗಿದೆ. ನಂತರ ಕಡತ ನಾಪತ್ತೆಯಾಗಿದೆ. ಇಡೀ ಕಚೇರಿಯಲ್ಲಿ ಹುಡುಕಾಡಿದರೂ ಕಡತ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ.