ಭಾರತದ ಎಲ್ಲಾ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಒಂದೇ ರೀತಿಯಾಗಿಲ್ಲ. ಆಯಾ ನಗರಗಳಲ್ಲಿ ದರ ವಿಭಿನ್ನವಾಗಿದೆ. ಯಾವ ನಗರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಅಗ್ಗ ? ಎಲ್ಲಿ ಹೆಚ್ಚು ದುಬಾರಿ ಎಂಬುದು ಇಂಟ್ರೆಸ್ಟಿಂಗ್ ಸಂಗತಿ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅತ್ಯಂತ ದುಬಾರಿ. ಅಂಡಮಾನ್-ನಿಕೋಬಾರ್ ದ್ವೀಪಗಳು, ದೆಹಲಿ ಮತ್ತು ಈಶಾನ್ಯದಂತಹ ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಧನ ಬೆಲೆ ಕಡಿಮೆಯಿದೆ.
ಸ್ಥಳೀಯ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ದರಗಳಲ್ಲಿನ ವ್ಯತ್ಯಾಸಗಳಿಂದಾಗಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕಳೆದ ವಾರವಷ್ಟೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆಯಾಗಿತ್ತು. ಸತತ 2 ವರ್ಷಗಳ ಬಳಿಕ ತೈಲ ಬೆಲೆಯಲ್ಲಿ ಬದಲಾವಣೆಯಾಗಿದೆ. ಈ ದರ ಕಡಿತವು ಜನರಿಗೆ ಸ್ವಲ್ಪ ಸಮಾಧಾನ ತಂದರೂ ಹೆಚ್ಚಿನ ಮೌಲ್ಯವರ್ಧಿತ ತೆರಿಗೆಯಿಂದಾಗಿ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100 ರೂಪಾಯಿಯಷ್ಟಿದೆ.
ಜಗನ್ ಮೋಹನ್ ರೆಡ್ಡಿ ಆಡಳಿತದ ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 109.87 ರೂಪಾಯಿ ಇದೆ. ಕೇರಳದಲ್ಲಿ ಒಂದು ಲೀಟರ್ ಪೆಟ್ರೋಲ್ 107.54 ರೂಪಾಯಿಗೆ ಮಾರಾಟವಾಗುತ್ತಿದೆ. ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.39 ರೂಪಾಯಿ.
ಬಿಜೆಪಿ ಆಡಳಿತವಿರುವ ರಾಜ್ಯಗಳು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಭೋಪಾಲ್ನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 106.45 ರೂಪಾಯಿ, ಪಾಟ್ನಾದಲ್ಲಿ 105.16 ರೂಪಾಯಿ, ಜೈಪುರದಲ್ಲಿ 104.86 ಮತ್ತು ಮುಂಬೈನಲ್ಲಿ 104.19 ರೂಪಾಯಿ ಇದೆ.
ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 103.93 ರೂಪಾಯಿ ಇದೆ. ಪೆಟ್ರೋಲ್ ಬೆಲೆ ಲೀಟರ್ಗೆ 100 ರೂ.ಗಿಂತ ಹೆಚ್ಚಿರುವ ಇತರ ರಾಜ್ಯಗಳೆಂದರೆ ಒಡಿಶಾ, ತಮಿಳುನಾಡು ಮತ್ತು ಛತ್ತೀಸ್ಗಢ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪೆಟ್ರೋಲ್ ಅಗ್ಗವಾಗಿದೆ. ಪ್ರತಿ ಲೀಟರ್ಗೆ 82 ರೂ.ಗೆ ಮಾರಾಟವಾಗುತ್ತಿದೆ. ಸಿಲ್ವಾಸ್ಸಾ ಮತ್ತು ದಮನ್ನಲ್ಲಿ ಲೀಟರ್ಗೆ 92.49 ರೂಪಾಯಿಯಷ್ಟಿದೆ. ದೆಹಲಿಯಲ್ಲಿ ಪ್ರತಿ ಲೀಟರ್ಗೆ 94.76 ರೂ., ಪಣಜಿಯಲ್ಲಿ ರೂ. 95.19, ಐಜ್ವಾಲ್ನಲ್ಲಿ 93.68 ರೂ. ಮತ್ತು ಗುವಾಹಟಿಯಲ್ಲಿ 96.12 ರೂಪಾಯಿ ಇದೆ.
ಡೀಸೆಲ್ ಬೆಲೆ ನೋಡೋದಾದ್ರೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ಲೀಟರ್ಗೆ 97.6 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕೇರಳ ರಾಜಧಾನಿ ತಿರುವನಂತಪುರದಲ್ಲಿ ಲೀಟರ್ಗೆ 96.41 ರೂ., ಹೈದರಾಬಾದ್ನಲ್ಲಿ 95.63 ರೂ. ಮತ್ತು ರಾಯಪುರದಲ್ಲಿ 93.31 ರೂಪಾಯಿ ಇದೆ. ಮಹಾರಾಷ್ಟ್ರ, ಛತ್ತೀಸ್ಗಢ ಮತ್ತು ಬಿಹಾರದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 92 ರಿಂದ 93 ರೂಪಾಯಿಯಷ್ಟಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಡೀಸೆಲ್ ಕೂಡ ಅಗ್ಗವಾಗಿದ್ದು, ಪ್ರತಿ ಲೀಟರ್ಗೆ 78 ರೂಪಾಯಿಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ಗೆ 87.66 ರೂ., ಗೋವಾದಲ್ಲಿ ಲೀಟರ್ಗೆ 87.76 ರೂಪಾಯಿ ಇದೆ.