ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಹಲವೆಡೆ ಅಸಮಾಧಾನ ಸ್ಫೋಟಗೊಂಡಿದ್ದು, ಇನ್ನು ಕೆಲ ನಾಯಕರು ಬಿಜೆಪಿ ವಿರುದ್ಧ ಬಂಡಾಯವೇಳುವ ಸಾಧ್ಯತೆ ಇದೆ.
ಬೆಂಗಳೂರು ಉತ್ತರ, ಕೊಪ್ಪಳ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ದಾವಣಗೆರೆ, ಬೀದರ್, ಶಿವಮೊಗ್ಗ, ಚಿಕ್ಕೋಡಿ, ತುಮಕೂರು ಕ್ಷೇತ್ರಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸ್ಥಳೀಯ ನಾಯಕರ ಅಸಮಾಧಾನದಿಂದ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ.
ಬೀದರ್ ನಲ್ಲಿ ಭಗವಂತ ಖೂಬಾಗೆ ಮತ್ತೆ ಬಿಜೆಪಿ ಟಿಕೆಟ್ ನೀಡಿರುವುದು ಮಾಜಿ ಸಚಿವ ಪ್ರಭುಚೌವ್ಹಾಣ್ ಗೆ ತೀವ್ರ ಅಸಮಾಧಾನ ತಂದಿದೆ. ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕೆ.ಎಸ್.ಈಶ್ವರಪ್ಪ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ಚೆಲ್ಲಿದ್ದರು. ಬಳಿಕ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನ್ನು ಪುತ್ರ ಕಾಂತೇಶ್ ಗೆ ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ ಹಾವೇರಿ ಟಿಕೆಟ್ ಬಸವರಾಜ್ ಬೊಮ್ಮಾಯಿಗೆ ಘೋಷಿಸಲಾಗಿದೆ. ಇದರಿಂದ ಗರಂ ಆಗಿರುವ ಈಶ್ವರಪ್ಪ ಬೆಂಬಲಿಗರ ಸಭೆ ಕರೆದಿದ್ದಾರೆ. ಬಂಡಾಯ ಸ್ಪರ್ಧೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಒಂದೊಮ್ಮೆ ಈಶ್ವರಪ್ಪ ಬಂಡಾಯವೆದ್ದರೆ ಯಡಿಯೂರಪ್ಪ ಪುತ್ರ ರಾಘವೇಂದ್ರ ಸ್ಪರ್ಧಿಸುತ್ತಿರುವ ಶಿವಮೊಗ್ಗ ಕ್ಷೇತ್ರ ಹಾಗೂ ಬೊಮ್ಮಾಯಿ ಸ್ಪರ್ಧಿಸುತ್ತಿರುವ ಹಾವೇರಿ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ.