ಬೆಂಗಳೂರು: ಬುಧವಾರ ರಾಜ್ಯದ ಹಲವೆಡೆ ಮಳೆಯಾದ ವರದಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಭದ್ರಾ ಅಭಯಾರಣ್ಯ ಪ್ರದೇಶದ ಮುತ್ತೋಡಿ ವಲಯದಲ್ಲಿ ಬುಧವಾರ ರಾತ್ರಿ ವರ್ಷದ ಮೊದಲ ಮಳೆಯಾಗಿದ್ದು, ಜನ ಸಂತಸಗೊಂಡಿದ್ದಾರೆ.
ಈ ಬಾರಿ ಮಳೆ ಇಲ್ಲದೇ ಬರಗಾಲದಿಂದಾಗಿ ಕುಡಿಯುವ ನೀರು, ಬೆಳೆಗಳಿಗೆ ನೀರುಣಿಸಲು ಜನ, ರೈತರು ಸಂಕಷ್ಟದಲ್ಲಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಸಂಭ್ರಮಿಸಿದ್ದಾರೆ. ಮೊದಲ ಮಳೆ ಹನಿಗಳು ಬೀಳುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದು ಮಳೆಯಲ್ಲಿ ನೆನೆದು ಸಂತಸ ವ್ಯಕ್ತಪಡಿಸಿದ್ದಾರೆ. ಮಳೆ ಹನಿ ಬಿದ್ದಾಗ ಮಣ್ಣಿನ ವಾಸನೆಯಿಂದ ಸಂತಸಪಟ್ಟಿದ್ದಾರೆ.
ಇನ್ನು ಕೊಡಗು ಜಿಲ್ಲೆ ಹಲವೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಮೂರ್ನಾಡು ವ್ಯಾಪ್ತಿಯ ಕಿಗ್ಗಾಲು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಜನರಲ್ಲಿ ಮಳೆಯಿಂದ ನಿರೀಕ್ಷೆಗಳು ಗರಿಗೆದರಿವೆ. ಮೂರ್ನಾಡು, ಕಾಕೋಟುಪರಂಬು ಸೇರಿದಂತೆ ಜಿಲ್ಲೆಯ ಹಲವು ಕಡೆ ತುಂತುರು ಮಳೆಯಾಗಿದೆ. ಮಡಿಕೇರಿ ಸೇರಿ ಹಲವಡೆ ದಟ್ಟ ಮೋಡ ಕವಿದ ವಾತಾವರಣ ಕಂಡು ಬಂದಿದೆ.