ತುಮಕೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕೆಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುನರುಚ್ಚರಿಸಿದ್ದಾರೆ. ಈ ಮೂಲಕ ದಲಿತ ಸಿಎಂ ನಮ್ಮ ಹಕ್ಕು ಎನ್ನುವ ಕೂಗಿಗೆ ಧ್ವನಿಗೂಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಾವಧಿ ಆಡಳಿತ ನಡೆಸಬೇಕೆಂಬುದು ಬಹುಪಾಲು ಶಾಸಕರ ಅಭಿಪ್ರಾಯವಾಗಿದೆ. ಒಂದು ವೇಳೆ ಸಿಎಂ ಬದಲಾಯಿಸಬೇಕೆಂದು ಹೈಕಮಾಂಡ್ ಚಿಂತಿಸಿದಲ್ಲಿ ದಲಿತರ ಆಯ್ಕೆಯಾಗಲಿ. ಅದರಲ್ಲಿಯೂ ಪರಮೇಶ್ವರ ಅರ್ಹತೆಯುಳ್ಳವರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು ಎಂದೇನಿಲ್ಲ. ಅವರು ಕೂಡ ಮುಖ್ಯಮಂತ್ರಿ ಆಗಲಿ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿ. ಪರಮೇಶ್ವರ್, ಕರ್ನಾಟಕದಲ್ಲಿ ಸ್ಥಿರ ಸರ್ಕಾರ ನಡೆಯುತ್ತಿದ್ದು, ದಲಿತ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದು ಪ್ರಸ್ತುತವಲ್ಲ. ಮುಂದೆ ನೋಡೋಣ ಎಂದು ಹೇಳಿದ್ದಾರೆ.