ಬೆಂಗಳೂರು : ಪಾಂಡಿಚೆರಿ ಮತ್ತು ತಮಿಳುನಾಡು ಸರ್ಕಾರಗಳು ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ ) ಉತ್ಪಾದನೆ ಮತ್ತು ಮಾರಾಟ ನಿಷೇಧಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಕೂಡ ಬಾಂಬೆ ಮಿಠಾಯಿ ಬ್ಯಾನ್ ಮಾಡಲು ಮುಂದಾಗಿದೆ.
ಕಾಟನ್ ಕ್ಯಾಂಡಿಯಲ್ಲಿ ರೋಡಮೈನ್-ಬಿ ಇರುವಿಕೆ ದೃಢವಾಗಿದ್ದು, ರೋಡಮೈನ್-ಬಿ ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಮಾದರಿ ಸಂಗ್ರಹಿಸಲು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಮೌಖಿಕ ಆದೇಶ ನೀಡಿದ್ದಾರೆ. ಸದ್ಯ ಕಾಟನ್ ಕ್ಯಾಂಡಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಲಾಗಿದ್ದು, ಪ್ರಯೋಗಾಲಯದ ಪರೀಕ್ಷೆಯ ವರದಿಯ ಬಳಿಕ ಕರ್ನಾಟಕದಲ್ಲೂ ಕ್ಯಾಂಡಿ ಬ್ಯಾನ್ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ.
ಬಾಂಬೆ ಮಿಠಾಯಿ ಮಕ್ಕಳ ಅಚ್ಚುಮೆಚ್ಚಿನ ತಿನಿಸಾಗಿದ್ದು, ಜಾತ್ರೆ ಸೇರಿದಂತೆ ಹಲವು ಕಡೆ ಇದನ್ನು ಮಾರಾಟ ಮಾಡಲಾಗುತ್ತದೆ. ಉದ್ದನೆಯ ಕೋಲಿಗೆ ಬಾಂಬೆ ಮಿಠಾಯಿಯನ್ನು ಸೆಕ್ಕಿಸಿಕೊಂಡು ಬೀದಿ ಬೀದಿಗಳಲ್ಲಿ ಮಾರಾಟ ಮಾಡುವುದನ್ನ ನಾವು ನೋಡುತ್ತಿರುತ್ತೇವೆ.
ಕ್ಯಾನ್ಸರ್ ಪ್ರಚೋದಕ ರಾಸಾಯನಿಕಗಳ ಉಪಸ್ಥಿತಿಯನ್ನು ದೃಢಪಡಿಸಿದ ಪರೀಕ್ಷಾ ವರದಿಗಳು ದೃಢಪಡಿಸಿದ ಕಾರಣ ತಮಿಳುನಾಡು ಸರ್ಕಾರ ಚೆನ್ನೈ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಹತ್ತಿ ಕ್ಯಾಂಡಿ ಮಾರಾಟವನ್ನು ನಿಷೇಧಿಸಿದೆ. ಆಹಾರ ವಿಶ್ಲೇಷಣಾ ಪ್ರಯೋಗಾಲಯವು ಹತ್ತಿ ಕ್ಯಾಂಡಿ ಮತ್ತು ವಿವಿಧ ಬಣ್ಣದ ಸಿಹಿತಿಂಡಿಗಳಲ್ಲಿ ರೋಡಮೈನ್-ಬಿ ಅನ್ನು ಪತ್ತೆಹಚ್ಚಿದೆ, ಅವು ಸೇವನೆಗೆ ಅನರ್ಹ ಮತ್ತು ಗುಣಮಟ್ಟಕ್ಕಿಂತ ಕಡಿಮೆ ಎಂದು ಘೋಷಿಸಿದೆ.